ʻನನ್ನನ್ನು ಕೇಳಿ ಬ್ಯಾಂಕಿನಲ್ಲಿ ಹಣ ಇಟ್ಟಿದ್ದೀರಾʼ ಎಂದು ವಿತ್ತ ಸಚಿವೆ ಪ್ರಶ್ನಿಸಿದರು:ವಂಚನೆಗೊಳಗಾದ ಠೇವಣಿದಾರರ ಆರೋಪ

Update: 2021-07-12 11:46 GMT

ಬೆಂಗಳೂರು, ಜು.12: ನನ್ನನ್ನು ಕೇಳಿ ನೀವು ರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮನ್ನು ಪ್ರಶ್ನಿಸಿದರು ಎಂದು ವಂಚನೆಗೊಳಗಾದ ಠೇವಣಿದಾರರು ಆರೋಪಿಸಿದರು.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠೇವಣಿದಾರ ಹರೀಶ್, ಇತ್ತೀಚೆಗೆ ನಗರಕ್ಕೆ ಬಂದಾಗ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಠೇವಣಿದಾರರು ವಿತ್ತ ಸಚಿವೆ ಬಳಿ, ತಾವು ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ಬಗ್ಗೆ ಗಮನಕ್ಕೆ ತರಲಾಯಿತು. ಈ ವೇಳೆ ಮರು ಪ್ರಶ್ನಿಸಿದ ಸಚಿವೆ, ನನ್ನ ಕೇಳಿ ರಾಘವೇಂದ್ರ ಬ್ಯಾಂಕ್‍ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು ಕೇಳಿ ನಿರ್ಲಕ್ಷಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಪ್ರಕರಣ ದಾಖಲಾಗಿ ಎರಡು ವರ್ಷ ಕಳೆದಿದೆ. ಆದರೂ, ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಮತ್ತೊಂದೆಡೆ ಸಿಐಡಿ ತನಿಖೆ ನಡೆಯತ್ತಿದೆ ಎನ್ನುತ್ತಿದ್ದರೂ, ಯಾವುದೇ ಪ್ರಯೋಜನವಿಲ್ಲ. ಅದೇ ರೀತಿ, ಆರು ತಿಂಗಳು ಯಾವುದೇ ರೀತಿಯ ವ್ಯವಹಾರ ನಡೆಸಬಾರದು ಎಂದು ಆರ್ ಬಿಐ ಸುತ್ತೋಲೆ ಹೊರಡಿಸಿದೆ. ಹೀಗೆ 6 ತಿಂಗಳು ಮುಂದುವರಿದುಕೊಂಡು ಹೋದರೆ, ನಾವು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

70 ಜನ ಹಣ ಕಳೆದುಕೊಂಡ ಹೂಡಿಕೆದಾರರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೂಡಿಕೆದಾರರ ತೇಜೋವಧೆಯಾಗುತ್ತಿದೆ ಎಂದ ಅವರು, ಇಂತಹ ವಂಚಕ ಬ್ಯಾಂಕ್‍ಗೆ ಆರ್ ಬಿಐ ಓ ಗ್ರೇಡ್ ಕೊಟ್ಟಿದೆ. ಇದು ಹೇಗೆ ಸಾಧ್ಯ. ವಂಚನೆ ನಡೆಸಿದ ಬ್ಯಾಂಕ್‍ಗೆ ಈಗ ಬೇರೆ ಬೇರೆ ಕಡೆ ಶಾಖೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ದುರುದ್ದೇಶ ಇದೆ ಎಂದರು.

ಒಟ್ಟು 25 ಸಾವಿರ ಮಂದಿ ಹಣ ಕಳೆದುಕೊಂಡಿದ್ದು, 2,130 ಕೋಟಿಗೂ ಅಧಿಕ ಹಣ ಬರಬೇಕೆಂದು ಠೇವಣಿದಾರರು ಹೇಳುತ್ತಿದ್ದಾರೆ. ಇನ್ನು, ಸ್ಥಳೀಯ ಶಾಸಕರು, ಸಂಸದರು ಸಹಕಾರ ಕೊಟ್ಟಿಲ್ಲ. ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ಮುಗಿದು, ಠೇವಣಿದಾರರಿಗೆ ನ್ಯಾಯ ದೊರೆಯಲಿ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News