ಮಂತ್ರಿಗಳು ಬರ್ತಾರೆ, ಹೋಗ್ತಾರೆ ಕೊಡಗಿಗೇನು ಲಾಭ ಇಲ್ಲ: ಎಂಎಲ್‍ಸಿ ವೀಣಾ ಅಚ್ಚಯ್ಯ ಅಸಮಾಧಾನ
ಮಡಿಕೇರಿ ಜು.12 : ಕೊಡಗು ಜಿಲ್ಲೆಗೆ ಸಚಿವರುಗಳು ಕಾಟಾಚಾರಕ್ಕೆ ಬಂದು ಹೋಗುತ್ತಿದ್ದು, ಯಾವುದೇ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಯಾಕೆ ಅಧಿಕಾರದಲ್ಲಿರಬೇಕು ಎಂದು ಪ್ರಶ್ನಿಸಿದರು.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರೆ ಸಚಿವರುಗಳು ಸೂಕ್ತ ಪರಿಹಾರ ಸೂಚಿಸದೆ ಉಡಾಫೆ ಉತ್ತರ ನೀಡುತ್ತಾರೆ. ರಾಮರಾಜ್ಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರಾವಣ ರಾಜ್ಯವನ್ನು ಸೃಷ್ಟಿ ಮಾಡಿದೆ. ಇದು ಕಣ್ಣು, ಕಿವಿ, ಬಾಯಿ ಇಲ್ಲದ ಸರ್ಕಾರ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಅಭಿವೃದ್ಧಿ ಪರ ಸಲಹೆ, ಸೂಚನೆಗಳನ್ನು ನೀಡಿ ಹೋಗುತ್ತಾರೆ. ಆದರೆ ಯಾರೂ ಕೂಡ ಸಚಿವರ ಆದೇಶವನ್ನು ಪಾಲಿಸುತ್ತಿಲ್ಲ. ಇತ್ತೀಚೆಗೆ ಕಂದಾಯ ಸಚಿವರು ಜಿಲ್ಲೆಗೆ ಬಂದು ಹೋಗಿದ್ದಾರೆ. ಆದರೆ ಇಲ್ಲಿರುವ ಕಂದಾಯ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಕೇವಲ ನೂತನ ತಾಲ್ಲೂಕು ಉದ್ಘಾಟನೆ ಮಾಡಿ, ಕೋವಿಡ್ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮರಳಿದ್ದಾರೆ. ಆದರೆ ಕೊಡಗಿನ ಜನ ಅನುಭವಿಸುತ್ತಿರುವ ಜಮ್ಮಾಭೂಮಿಯಂತಹ ನೈಜ ಕಂದಾಯ ಸಮಸ್ಯೆಗಳ ಬಗ್ಗೆ ಅವರು ಕಾಳಜಿ ತೋರಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಸಚಿವರು ಸೂಕ್ತ ಉತ್ತರ ನೀಡುತ್ತಿಲ್ಲ, ಕಂದಾಯ ಸಚಿವರಿಗೆ ಜಮ್ಮಾ ಎಂದರೆ ಏನೆಂದೇ ತಿಳಿದಿಲ್ಲವೆಂದು ವೀಣಾಅಚ್ಚಯ್ಯ ಆರೋಪಿಸಿದರು.
ಪ್ರಾಕೃತಿಕ ವಿಕೋಪ ಸಂಭವಿಸಿ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡ ಜಿಲ್ಲೆಯ ನೂರಾರು ಮಂದಿಗೆ ಇಂದಿಗೂ ಸರ್ಕಾರ ಸೂಕ್ತ ಪರಿಹಾರವನ್ನು ನೀಡಿಲ್ಲ. 2018ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಳೆಹಾನಿ ಸಂತ್ರಸ್ತರಿಗೆ ಸುಮಾರು 800 ಮನೆಗಳನ್ನು ನಿರ್ಮಿಸಿಕೊಟ್ಟಿತು. ತಲಾ ರೂ.5 ಲಕ್ಷಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಬಿಜೆಪಿ ನೇತೃತ್ವದ ಸರ್ಕಾರ ಭರವಸೆಯನ್ನಷ್ಟೇ ನೀಡಿತು. ಆದರೆ ಕೊಡಗಿನ ಅನೇಕ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಇಲ್ಲಿಯವರೆಗೆ ಜಾಗವನ್ನೇ ಸರ್ಕಾರ ಗುರುತಿಸಿಲ್ಲ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಾಳಿ, ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡವರು ಇಂದಿಗೂ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ.
ಪರಿಹಾರ ನೀಡಿ ಎಂದು ಸಂತ್ರಸ್ತರು ಕಂದಾಯ ಇಲಾಖೆಗೆ ಅಲೆಯುತ್ತಿದ್ದಾರೆ, ಆದರೆ ಕಡತಗಳು ಮಾತ್ರ ವಿಲೇವಾರಿಯಾಗುತ್ತಿಲ್ಲ. 2018 ರಿಂದೀಚೆಗೆ ಅನೇಕ ತೋಟ ಮತ್ತು ಗದ್ದೆಗಳು ನಾಶವಾಗಿವೆ. ಬಿದ್ದ ಮರಗಳನ್ನು ತೆರವುಗೊಳಿಸಲು ಕೂಡ ಅವಕಾಶ ನೀಡುತ್ತಿಲ್ಲ. ಅನೇಕರು ಕೃಷಿ ಮಾಡಲಾಗದ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ. ಎμÉ್ಟೀ ಮನವಿಗಳನ್ನು ನೀಡಿದರೂ ತನಗೇನು ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.
ಮನೆ ಬಿದ್ದ ತಮ್ಮ ಸ್ವಂತ ಜಾಗದಲ್ಲೇ ಮನೆ ನಿರ್ಮಿಸಿಕೊಳ್ಳಲು ಪರಿಹಾರ ಧನ ಕೋರಿ ಸಲ್ಲಿಸಿದ ಅರ್ಜಿ ಇಲ್ಲಿಯವರೆಗೆ ವಿಲೇವಾರಿಯಾಗಿಲ್ಲ. ಅಲ್ಲದೆ ಮಳೆಹಾನಿ ಕಾಮಗಾರಿಗಳು ಕೂಡ ವಿಳಂವಾಗಿ ನಡೆಯುತ್ತಿದೆ. ಕಂದಾಯ ಸಚಿವರು ಸುಮಾರು 106 ಕೋಟಿ ರೂ.ಗಳಷ್ಟು ವಿಪತ್ತು ಪರಿಹಾರ ನಿಧಿ ಜಿಲ್ಲಾಡಳಿತದ ಬಳಿ ಇದೆ ಎಂದು ಹೇಳಿದ್ದಾರೆ. ಆದರೆ ಎಲ್ಲೂ ಕಾಮಗಾರಿಗಳು ಚುರುಕಾಗಿ ನಡೆಯುತ್ತಿಲ್ಲ. ನಡೆದ ಕಾಮಗಾರಿಯ ಬಿಲ್ ನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ನೀಡಿಲ್ಲ ಎನ್ನುವ ಆರೋಪವಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ವಿಶೇಷ ಸಭೆಯೊಂದನ್ನು ನಡೆಸಿ ಮಳೆಹಾನಿಗೆ ಸಂಬಂಧಿಸಿದ ಕಳೆದ ಮೂರು ವರ್ಷಗಳ ಸಂತ್ರಸ್ತರ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಮನೆಗಳ ನಿರ್ಮಾಣಕ್ಕೆ ಜಾಗವನ್ನು ಗುರುತಿಸಬೇಕು. ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನಿಗಧಿ ಮಾಡಿದ ಹಣ ಬಿಡುಗಡೆ ಮಾಡಬೇಕು. ತೋಟ ಮತ್ತು ಗದ್ದೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಬಿದ್ದ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ತೋಟ ಮತ್ತು ಗದ್ದೆಗೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ಇಲ್ಲಸಲ್ಲದ ನಿಯಮಗಳನ್ನು ಎಳೆದು ತಂದು ಅಡ್ಡಿ ಪಡಿಸಲಾಗುತ್ತಿದೆ. ಬೇರೆ ಯಾವುದೇ ಜಿಲ್ಲೆಯಲ್ಲಿ ಅನ್ವಯವಾಗದ ಕಂದಾಯ ಕಾನೂನುಗಳನ್ನು ಕೊಡಗಿನಲ್ಲಿ ಜಾರಿಗೆ ತರಲಾಗುತ್ತಿದೆ. ವಿನಾಕಾರಣ ಭೂಮಾಲೀಕರಿಗೆ ತೊಂದರೆ ನೀಡಲಾಗುತ್ತಿದೆ. ಜಮೀನಿಗೆ ಸಂಬಂಧಿಸಿದ ಕಡತಗಳ ಶೀಘ್ರ ವಿಲೇವಾರಿಗೆ ಕಂದಾಯ ಸಚಿವರು ಜಿಲ್ಲೆಯ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ತಿಳಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ತ್ವರಿತವಾಗಿ ಸರ್ವೆ ಮಾಡಿ ಉದ್ದೇಶಿತ ಯೋಜನೆಯನ್ನು ಸಾಕಾರಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಸ್ಥಳೀಯರ ಬೇಡಿಕೆಯಂತೆ ಸ್ಮಶಾನಕ್ಕೂ ಜಾಗ ಮೀಸಲಿರಿಸಬೇಕು ಎಂದರು.
ವ್ಯಾಕ್ಸಿನ್ ಕೊರತೆ
ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ ಇದೆ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಜನರು ಅತಿ ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಆದರೆ ಸಕಾಲದಲ್ಲಿ ಸಮರ್ಪಕವಾಗಿ ವ್ಯಾಕ್ಸಿನ್ ಲಭ್ಯವಾಗುತ್ತಿಲ್ಲ. ಸಾಲಿನಲ್ಲಿ ನಿಂತವರನ್ನು ಲಸಿಕೆ ಮುಗಿಯಿತು ಎಂದು ವಾಪಾಸ್ ಕಳುಹಿಸಿದ ಉದಾಹರಣೆಗಳೂ ಇದೆ. ಗ್ರಾಮೀಣ ಭಾಗದಲ್ಲಿ ವ್ಯಾಕ್ಸಿನ್ ಕೊರತೆ ಹೆಚ್ಚು ಕಾಡುತ್ತಿದೆ. ಯಾವುದೇ ಕಾರಣಕ್ಕೂ ಗ್ರಾಮೀಣ ಜನರನ್ನು ಕಡೆಗಣಿಸಬಾರದು. ವ್ಯಾಕ್ಸಿನ್ ಲಭ್ಯತೆ ಬಗ್ಗೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ನೈಜ ಮಾಹಿತಿ ನೀಡಬೇಕು ಎಂದು ಹೇಳಿದ ವೀಣಾಅಚ್ಚಯ್ಯ ಗೊಂದಲಗಳಿಗೆ ತೆರೆ ಎಳೆಯುವಂತೆ ತಿಳಿಸಿದರು.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್ ಉಲ್ಬಣಿಸದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯನ್ನು ಎದುರಿಸಲು ಕೂಡ ಈಗಲೇ ಸನ್ನದ್ಧರಾಬೇಕು. ಕೊಡಗು ಅತ್ಯಂತ ಚಿಕ್ಕ ಜಿಲ್ಲೆಯಾಗಿರುವುದರಿಂದ ಶೀಘ್ರ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಅರಣ್ಯ ಭವನಕ್ಕೆ ಮುತ್ತಿಗೆ
ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಜನವಸತಿ ಪ್ರದೇಶ ಮತ್ತು ತೋಟಗಳಲ್ಲಿ ಸುಮಾರು 100 ಕ್ಕೂ ಅಧಿಕ ಕಾಡಾನೆಗಳ ಬೀಡು ಬಿಟ್ಟಿರುವ ಬಗ್ಗೆ ಸಂಶಯವಿದೆ. ಯಾವ ಬೆಳೆಗಾರ ಮತ್ತು ಕಾರ್ಮಿಕರಿಗೂ ನಿರಾತಂಕವಾಗಿ ತೋಟ, ಗದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಾವು, ನೋವುಗಳ ಸಂಭವಿಸಿದರೂ ಅರಣ್ಯ ಇಲಾಖೆ ಮಾತ್ರ ಸತ್ತವರಿಗೆ ಪರಿಹಾರ ನೀಡಿದ ಮಾಹಿತಿ ನೀಡಿ ಕೈತೊಳೆದುಕೊಳ್ಳುತ್ತಿದೆ.
ಕಳೆದ 3 ವರ್ಷಗಳಿಂದ ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಾಶ್ವತ ಪರಿಹಾರಕ್ಕಾಗಿ ಜಿಲ್ಲೆಯ ಸಂಸದರು ಹಾಗೂ ಶಾಸಕರು ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿಲ್ಲ. ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿವೆ. ಆನೆ ಕಂದಕ, ಸೋಲಾರ್ ಬೇಲಿ ಮತ್ತು ರೈಲ್ವೆ ಕಂಬಿಗಳ ಬೇಲಿ ಕಾಡಾನೆಗಳ ದಾಳಿಯನ್ನು ತಡೆಯುವಲ್ಲಿ ವಿಫಲವಾಗಿವೆ. ಇವುಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎನ್ನುವ ಆರೋಪವೂ ಕೇಳಿ ಬಂದಿದೆ.
ತಕ್ಷಣ ಸರ್ಕಾರ ಮತ್ತು ಅರಣ್ಯ ಇಲಾಖೆ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದು, ಸಾವು, ನೋವುಗಳು ಸಂಭವಿಸುತ್ತಿದೆ. ಆದರೂ ಕನಿಷ್ಠ ಸಾಂತ್ವನ ಹೇಳಲು ಕೂಡ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲವೆಂದು ವೀಣಾಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಗಾರರ ಕಡೆಗಣನೆ
ಕೊಡಗಿನಲ್ಲಿ ಹಲವರ ಹೋರಾಟದ ಫಲವಾಗಿ ಪೊನ್ನಂಪೇಟೆ ಮತ್ತು ಕುಶಾಲನಗರ ಪ್ರತ್ಯೇಕ ತಾಲ್ಲೂಕಾಗಿ ರಚನೆಯಾಗಿದೆ. ಆದರೆ ಎರಡೂ ನೂತನ ತಾಲ್ಲೂಕುಗಳ ಉದ್ಘಾಟನೆ ಸಂದರ್ಭ ಹೋರಾಟಗಾರರನ್ನು ಕಡೆಗಣಿಸಿರುವುದು ಖಂಡನೀಯ. ಪೊನ್ನಂಪೇಟೆ ತಾಲೂಕಿಗಾಗಿ ಸಿ.ಎಸ್.ಅರುಣ್ ಮಾಚಯ್ಯ ಹಾಗೂ ಸಂಗಡಿಗರು ಮತ್ತು ಕುಶಾಲನಗರ ತಾಲ್ಲೂಕಿಗಾಗಿ ವಿ.ಪಿ.ಶಶಿಧರ್ ಹಾಗೂ ಸಂಗಡಿಗರು ಹಗಲಿರುಳೆನ್ನದೆ ಹೋರಾಟ ನಡೆಸಿದ್ದಾರೆ. ಉಪವಾಸ ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಆದರೆ ನೂತನ ತಾಲ್ಲೂಕುಗಳ ಉದ್ಘಾಟನೆ ಸಂದರ್ಭ ಆಡಳಿತ ಪಕ್ಷದ ಜನಪ್ರತಿನಿಧಿಗಳು ಕನಿಷ್ಠ ಹೋರಾಟಗಾರರನ್ನು ಸ್ಮರಿಸಿಕೊಳ್ಳುವ ಸೌಜನ್ಯವನ್ನು ಕೂಡ ತೋರಿಲ್ಲ. ಇದು ಖಂಡನೀಯ, ಚುನಾವಣೆ ಬರುವಾಗ ರಾಜಕೀಯ ಮಾಡೋಣ. ಆದರೆ ಅಭಿವೃದ್ಧಿ ವಿಚಾರದಲ್ಲಿ ಯಾರೋ ಮಾಡಿದ್ದನ್ನು ತಾವೇ ಮಾಡಿದಂತೆ ಪ್ರತಿಬಿಂಬಿಸಿಕೊಳ್ಳುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟನ್ನು ಕಾಯ್ದುಕೊಂಡಾಗ ಮಾತ್ರ ಕೊಡಗು ಅಭಿವೃದ್ಧಿ ಹೊಂದಲು ಸಾಧ್ಯ. ಸಮ್ಮಿಶ್ರ ಸರ್ಕಾರವಿದ್ದಾಗ ನೂತನ ತಾಲ್ಲೂಕು ಘೋಷಣೆಯಾಯಿತೇ ಹೊರತು ಕೇವಲ ಬಿಜೆಪಿ ಅಥವಾ ಜೆಡಿಎಸ್ ನಿಂದಾದ ಕಾರ್ಯ ಇದಲ್ಲ ಎಂದರು.
ಬೆಲೆ ಏರಿಕೆ ಖಂಡನೀಯ
ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನ ಏರಿಕೆಯಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಇದೇ ಕಾರಣಕ್ಕೆ ಗಗನಕ್ಕೇರಿದೆ. ಕಡು ಬಡವರು, ಕಾರ್ಮಿಕರು ಜನಸಾಮಾನ್ಯರು ಆರ್ಥಿಕ ಹಿನ್ನಡೆಯಿಂದ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಜನ ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿ ಸರ್ಕಾರ ಜನರ ನೆರವಿಗೆ ಬರಬೇಕಾಗಿತ್ತು. ಆದರೆ ಜನರ ಬಳಿ ಹಣವೇ ಇಲ್ಲದ ಈ ಪರಿಸ್ಥಿತಿಯಲ್ಲಿ ಪ್ರತಿದಿನ ಬೆಲೆ ಏರಿಕೆ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದೆ ಎಂದು ವೀಣಾಅಚ್ಚಯ್ಯ ಆರೋಪಿಸಿದರು.
ಕುರುಡು ಭಕ್ತರು
ನಿತ್ಯ ಬೆಲೆ ಏರಿಕೆಯಿಂದ ದೇಶದ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ, ಆದರೆ ಬಿಜೆಪಿಯ ಕುರುಡು ಭಕ್ತರು ಬೇರೆಯದ್ದೇ ಕಾರಣ ನೀಡಿ ಎಷ್ಟು ಬೇಕಾದರೂ ಬೆಲೆ ಏರಿಕೆಯಾಗಲಿ ಎಂದು ಭಂಡ ಧೈರ್ಯ ತೋರುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಸರ್ಕಾರ ತಪ್ಪು ಮಾಡಿದರೆ ನಿಷ್ಪಕ್ಷಪಾತವಾಗಿ ಟೀಕಿಸುವ ಮನೋಭಾವ ಇರಬೇಕು ಎಂದರು.
ಪ್ರವಾಸಿಗರ ತಪಾಸಣೆಯಾಗಲಿ
ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಮಂದಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಆರಂಭಗೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ. ಪ್ರವಾಸಿಗರು ಬರಲಿ, ಆದರೆ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ವರದಿ ತರುವಂತೆ ನೋಡಿಕೊಳ್ಳಬೇಕು. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯಾಗಬೇಕೆಂದು ವೀಣಾಅಚ್ಚಯ್ಯ ತಿಳಿಸಿದರು.
ರೆಸಾರ್ಟ್, ಹೊಟೇಲ್, ಲಾಡ್ಜ್ ಹಾಗೂ ಹೋಂಸ್ಟೇ ಮಾಲೀಕರುಗಳು ಕೂಡ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ನಗರಸಭಾ ಸದಸ್ಯ ಬಿ.ವೈ.ರಾಜೇಶ್, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.