×
Ad

ಪೋಷಕರನ್ನು ಕಳೆದುಕೊಂಡ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಗ್ರಹ

Update: 2021-07-12 18:05 IST

ಬೆಂಗಳೂರು, ಜು. 12: `ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬದಲ್ಲಿನ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಶೇ.50 ಪ್ರತಿಶತಃ ಕಡಿಮೆ ಮಾಡಬೇಕು. ಕೋವಿಡ್‍ನಿಂದ ಪೋಷಕರನ್ನು ಕಳೆದುಕೊಂಡ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಬೇಕು' ಎಂದು ಎಸ್‍ಐಒ ಕರ್ನಾಟಕ ಆಗ್ರಹಿಸಿದೆ.

`ರಾಜ್ಯಾದ್ಯಂತ ಸಾಧ್ಯವಾದಷ್ಟು ಹೆಚ್ಚು ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕು. ಸಿಇಟಿ ಅಭ್ಯರ್ಥಿಗಳಿಗೆ ಮತ್ತು ಪರೀಕ್ಷಾ ಮೇಲ್ವಿಚಾರಕರಿಗೆ ದೂರದ ಪ್ರಯಾಣದ ಅಗತ್ಯ ಬೀಳದಿರುವ ಹಾಗೇ ವ್ಯವಸ್ಥೆ ಮಾಡಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ಆನ್‍ಲೈನ್ ತರಗತಿಗಳು ಯಶಸ್ವಿಯಾಗಿಲ್ಲ ಎಂಬುದು ವರದಿಗಳಿಂದ ಸಾಬೀತಾಗಿದೆ. ಹೀಗಾಗಿ ಮಲೆನಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ಕೋರ್ಸ್‍ಗಳನ್ನು ಆರಂಭಿಸಬೇಕು. ಪ್ರವೇಶ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳ ಅಂತಿಮ ರ್ಯಾಂಕನ್ನು ಪ್ರಕಟಿಸಲು ಸಿಇಟಿ ಫಲಿತಾಂಶದ ಜೊತೆಗೆ ದ್ವಿತೀಯ ಪಿಯು ಪರೀಕ್ಷೆ ಅಂಕಗಳ ಪರಿಗಣೆಗೆ ಸಂಬಂಧಿಸಿದ ಗೊಂದಲ ನಿವಾರಿಸಬೇಕು.

`ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಾರ್ಷಿಕ ಬಸ್ ಪಾಸ್ ಸೌಲಭ್ಯದ ವೆಚ್ಚವನ್ನು ಶೇ.50ರಷ್ಟು ಕಡಿತಗೊಳಿಸಬೇಕು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿನ್ನಡೆ ಅನುಭವಿಸಿದ್ದು, ಅದನ್ನು ಸುಧಾರಿಸಲು ಸರಕಾರ ಸೂಕ್ತ ಶೈಕ್ಷಣಿಕ ವ್ಯವಸ್ಥೆ ರೂಪಿಸಿ ಅನುಷ್ಠಾನಕ್ಕೆ ತರಬೇಕು' ಎಂದು ಎಸ್‍ಐಒ-ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News