ಹೈದ್ರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಸಲ್ಲದು: ಎಸ್.ಡಿ.ಪಿ.ಐ

Update: 2021-07-12 13:00 GMT

ಬೀದರ್, ಜು.12: ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುವುದು ಸಲ್ಲದು. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಮತ್ತು ಬಳ್ಳಾರಿ ಜಿಲ್ಲೆಗಳನ್ನು ವಿಶೇಷ ವಲಯಗಳಾಗಿ ಸಂವಿಧಾನದ 371-ಜೆ ಅಡಿಯಲ್ಲಿ ಅಭಿವೃದ್ಧಿಗಾಗಿ ಒಕ್ಕೂಟ ಸರಕಾರ ವಿಶೇಷ ಯೋಜನೆ ಹಮ್ಮಿಕೊಂಡಿತ್ತು ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.

ಸೋಮವಾರ ಬೀದರ್ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ, ನೀರಾವರಿ, ಪ್ರವಾಸೋದ್ಯಮ, ಮೂಲಭೂತ ಸೌಕರ್ಯ, ಕೈಗಾರಿಕೆಗಳ ಸ್ಥಾಪನೆ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮುಂತಾದ ಯಾವುದೇ ಗುರಿ ಸಾಧಿಸಿಲ್ಲ. ರಾಜ್ಯ ಸರಕಾರ ಕೂಡಲೇ ಒಕ್ಕೂಟ ಸರಕಾರದಿಂದ ಅನುದಾನ ಪಡೆದು ಈ ಜಿಲ್ಲೆಗಳ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿದರು.

ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿ, ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರದ ಮಂತ್ರಿ ಮಂಡಲಗಳಲ್ಲಿ ಕ್ರಿಮಿನಲ್ ಹಿನ್ನಲೆ ಇರುವವರಿಗೆ ಅವಕಾಶ ನೀಡಬಾರದು. ರಾಜಕೀಯ ಅಧಿಕಾರ ಮತ್ತು ನೀತಿ ರೂಪಿಸುವ ಸ್ಥಾನಗಳಲ್ಲಿ ಕ್ರಿಮಿನಲ್ ಹಿನ್ನಲೆಯವರು ಮತ್ತು  ಬಂಡವಾಳಶಾಹಿಗಳು ತುಂಬಿದರೆ ಯುವಜನತೆಗೆ ತಪ್ಪು ಮಾದರಿಯನ್ನು ತೋರಿಸಿದಂತಾಗುತ್ತದೆ. ಸಮಗ್ರ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕೆಂದು ಎಸ್.ಡಿ.ಪಿ.ಐ ಆರಂಭದಿಂದಲೂ ಒತ್ತಾಯಿಸುತ್ತಿದೆ ಎಂದರು.

ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಮ್ ಹಸನ್ ಮಾತನಾಡಿ, ಕೊರೋನ ಸಾಂಕ್ರಮಿಕ ಮತ್ತು ಲಾಕ್‍ಡೌನ್ ನಿಂದಾಗಿ ರಾಜ್ಯದಲ್ಲಿ ಕೈಗಾರಿಕಾ ಉದ್ಯಮಗಳು ತೀರಾ ಸಂಕಷ್ಟದಲ್ಲಿದೆ. ಸಣ್ಣಪುಟ್ಟ ಅಂಗಡಿಗಳು, ಕಿರು ಮತ್ತು ಗೃಹ ಕೈಗಾರಿಕೆಗಳು, 1 ಕೋಟಿಗಿಂತ ಕಡಿಮೆ ಬಂಡವಾಳದ ಎಲ್ಲ ಉದ್ಯಮಗಳಲ್ಲಿ 80 ಶೇಕಡಾ ಸಂಸ್ಥೆಗಳು ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿದೆ ಎಂದು ವರದಿಗಳು ಬರುತ್ತಿವೆ ಎಂದರು.

ಬಾಡಿಗೆದಾರರಿಗೆ ಬಾಡಿಗೆ ವಿನಾಯಿತಿ, ವಿದ್ಯುತ್ ಬಿಲ್ ಮನ್ನಾ, ಕಾರ್ಮಿಕರಿಗೆ ವಿಶೇಷ 20 ಸಾವಿರ ರೂಪಾಯಿ ಪರಿಹಾರ, ಸೇಲ್ಸ್ಮೆನ್ ಮತ್ತಿತರರಿಗೆ ಪರಿಹಾರ, ಸಂಕಷ್ಟದಲ್ಲಿರುವ ಉದ್ಯಮಗಳಿಗೆ ಬಡ್ಡಿರಹಿತ ಸಾಲ ವ್ಯವಸ್ಥೆ ಮಾಡಬೇಕೆಂದು ಎಸ್.ಡಿ.ಪಿ.ಐ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News