ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ಹೆಸರಿಡಲು ಕರುನಾಡು ಸಂರಕ್ಷಣಾ ವೇದಿಕೆ ಒತ್ತಾಯ
ಶಿವಮೊಗ್ಗ, ಜು.12: ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರಿಡಬೇಕೆಂದು ಕರುನಾಡು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಪಿ. ಶಿವಮೂರ್ತಿ ಪತ್ರಿಕಾಗೋಷ್ಠೀಯಲ್ಲಿ ಒತ್ತಾಯಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪನವರು ಸಾಕಷ್ಟು ಶ್ರಮಿಸಿದ್ದು, ಅಗತ್ಯ ಅನುದಾನಗಳನ್ನು ಸಕಾಲಕ್ಕೆ ಒದಗಿಸುವ ಮೂಲಕ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗಲು ಶ್ರಮವಹಿಸಿದ್ದಾರೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವುದೇ ಸೂಕ್ತ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಮೂರ್ತಿ ಮಾತನಾಡಿ, ಕೋವಿಡ್ -೧೯ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ ಒಂದು ಲಕ್ಷ ರೂ. ಮೊತ್ತವನ್ನು ವಿತರಿಸಲು ಅಧಿಕಾರಿಗಳು ಸತಾಯಿಸುತ್ತಿದ್ದು, ಕೂಡಲೇ ಈ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಆದೇಶಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಂಜಾನಾಯ್ಕ್, ಹೇಮಂತ್ ಕುಮಾರ್ ಇದ್ದರು.