×
Ad

ಕೊಡಗಿನಲ್ಲಿ ಉತ್ತಮ ಮಳೆ, ಮೈಕೊರೆಯುವ ಚಳಿ

Update: 2021-07-12 19:09 IST

ಮಡಿಕೇರಿ ಜು.12 : ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಮಳೆ ಬಿರುಸು ಪಡೆದುಕೊಂಡಿದೆ. ಮಡಿಕೇರಿ ತಾಲೂಕಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದ್ದು, ಚಳಿಯ ವಾತಾವರಣವಿದೆ.

ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಾರಂಗಿ ವ್ಯಾಪ್ತಿಯಲ್ಲೂ ಮಳೆ ಸುರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ. 

ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು, ಕೃಷಿಕ ವರ್ಗ ಹರ್ಷಗೊಂಡಿದೆ. ಜಿಲ್ಲೆಯ ಬೆಟ್ಟಗುಡ್ಡ ಹಾಗೂ ನದಿ ತೀರದ ನಿವಾಸಿಗಳು ಮಳೆ ಹೆಚ್ಚಾಗುವ ಆತಂಕದಲ್ಲಿದ್ದಾರೆ. ಮಡಿಕೇರಿ ನಗರದಲ್ಲಿ ಮಂಜು ಮುಸುಕಿದ್ದು, ಗಾಳಿ, ಮಳೆ, ಚಳಿಯ ವಾತಾವರಣವಿದೆ. ಈ ವಾತಾವರಣದಲ್ಲಿ ಕಾಲ ಕಾಳೆಯಲು ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರವಾಸಿಗರ ಆಗಮನವಾಗುತ್ತಿದೆ. ಮಳೆಯಿಂದ ಪ್ರವಾಸಿತಾಣಗಳು ಕೂಡ ಹಸಿರಿನಿಂದ ಆಕರ್ಷಣೆ ಪಡೆದುಕೊಂಡಿದೆ. ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಎನ್‍ಡಿಆರ್‍ಎಫ್ ತಂಡ ಸನ್ನದ್ಧವಾಗಿದೆ. 

ಮಳೆ ವಿವರ 

ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 1019.10 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 706.28 ಮಿ.ಮೀ ಮಳೆಯಾಗಿತ್ತು.   
                         
ಮಡಿಕೇರಿ ತಾಲೂಕಿನಲ್ಲಿ 1502.15 ಮಿ.ಮೀ, ಕಳೆದ ವರ್ಷ ಇದೇ 1029.61 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 878.31 ಮಿ.ಮೀ. ಕಳೆದ ವರ್ಷ 668.07 ಮಿ.ಮೀ. ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 676.85 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 421.16 ಮಿ.ಮೀ. ಮಳೆಯಾಗಿತ್ತು. 

ಹಾರಂಗಿ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2845.36 ಅಡಿಗಳು. ಕಳೆದ ವರ್ಷ ಇದೇ ದಿನ 2850.76 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 3.8 ಮಿ.ಮೀ., ಇಂದಿನ ನೀರಿನ ಒಳಹರಿವು 3,564 ಕ್ಯುಸೆಕ್. ಕಳೆದ ವರ್ಷ ಇದೇ ದಿನ 1355 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್.  ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 300 ಕ್ಯುಸೆಕ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News