ಮುಖ್ಯಮಂತ್ರಿ ಆಗುವ ಎಲ್ಲ ಯೋಗ್ಯತೆ ನನಗೆ ಇದೆ: ಸಚಿವ ಉಮೇಶ್ ಕತ್ತಿ
ಧಾರವಾಡ, ಜು. 12: 'ನಾನೂ ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಎಲ್ಲ ಯೋಗ್ಯತೆ ನನಗೆ ಇದೆ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ತಮ್ಮ ಮನದ ಇಂಗಿತವನ್ನು ಬಹಿರಂಗಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಯಾವುದೇ ಕಪ್ಪು ಚುಕ್ಕೆ ನನಗಿಲ್ಲ. ಮುಖ್ಯಮಂತ್ರಿಯಾಗಲು ಆಸೆಯೂ ನನಗೂ ಇದೆ. ಮುಖ್ಯಮಂತ್ರಿ ಆದ ಬಳಿಕ ಈ ದೇಶದ ಪ್ರಧಾನಮಂತ್ರಿ ಆಗುವ ಆಸೆಯೂ ಸಹಜವಾಗಿಯೇ ಇದ್ದೇ ಇರುತ್ತದೆ' ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನ್ಯಾಯ ಸಹಿಸುವುದಿಲ್ಲ: `ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ. ನಾನು ಉತ್ತರ ಕರ್ನಾಟಕದ ಜನರನ್ನು ಎಬ್ಬಿಸಬೇಕಾಗುತ್ತದೆ. ಈ ಭಾಗಕ್ಕೆ ಅನ್ಯಾಯ ಆದರೆ, ಉತ್ತರ ಕರ್ನಾಟಕವನ್ನು ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ. ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಉಮೇಶ್ ಕತ್ತಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು
ಸಿದ್ದರಾಮಯ್ಯನವರ ಸರಕಾರ ಶೇ.10 ಪರ್ಸೆಂಟ್ ಕಮಿಷನ್ ಸರಕಾರ ಎಂದು ರಾಜ್ಯದ ಜನರ ಮಾತನಾಡುತ್ತಾರೆ. ನಮ್ಮ ಸರಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಹಾಗೆ ನಡೆದಿದ್ದರೆ ಕಾಂಗ್ರೆಸ್‍ನವರು ಕೋರ್ಟ್‍ಗೆ ಹೋಗಲಿ ಎಂದು ಸಲಹೆ ನೀಡಿದ ಉಮೇಶ್ ಕತ್ತಿ, ಶಾಸಕ ಅರವಿಂದ ಬೆಲ್ಲದ್ ಏಕೆ ಮುಖ್ಯಮಂತ್ರಿ ಆಗಬಾರದು. ನಾನೂ ಸಿಎಂ ಆಗಬಹುದು, ಬೆಲ್ಲದ್ ಅವರೂ ಸಿಎಂ ಆಗಬಹುದು, ಮುರುಗೇಶ್ ಆರ್.ನಿರಾಣಿ ಅವರೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದರು.