ಮೇಕೆದಾಟು ಯೋಜನೆ: ಭಿನ್ನಾಭಿಪ್ರಾಯ ಮರೆತು ಸರಕಾರದ ಜತೆಗೆ ನಿಲ್ಲುತ್ತೇವೆ ಎಂದ ಡಿ.ಕೆ. ಶಿವಕುಮಾರ್

Update: 2021-07-12 14:20 GMT

ಬೆಂಗಳೂರು, ಜು.12: ‘ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದೆ ಎನ್ನುವ ಬಿಜೆಪಿ, ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ, ಅಗತ್ಯ ಅನುಮತಿ ಪಡೆದು ಈ ಯೋಜನೆಗೆ ನಾಳೆಯೆ ಭೂಮಿ ಪೂಜೆ  ಮಾಡಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸರಕಾರದ ಜತೆಗೆ ನಾವೆಲ್ಲರೂ ನಿಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತೊರೆದ ನಾಯಕರನ್ನು ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮೇಕೆದಾಟು ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿನ ಎಲ್ಲ ಪಕ್ಷಗಳ ಅಜೆಂಡಾ. ಇನ್ನೂ ನೂರು ವರ್ಷವಾದರೂ ಅವರ ರಾಜಕೀಯ ಅಜೆಂಡಾ ಇದೇ ಆಗಿರುತ್ತದೆ. ಮೇಕೆದಾಟು ಯೋಜನೆ ಮಾಡಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ ಎಂದು ಅವರು ತಿಳಿಸಿದರು.

ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಡಿಎಂಕೆ ಆಗಲಿ, ಅಣ್ಣಾ ಡಿಎಂಕೆ ಆಗಲಿ, ಅವರ ರಾಜಕೀಯ ಅಜೆಂಡಾ ಒಂದೇ. ಆ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ರಾಜ್ಯ ಸರ್ವಪಕ್ಷ ನಿಯೋಗ ಯಾಕೆ ಕೊಂಡೊಯ್ಯಬೇಕು? ಮೇಕೆದಾಟು ವಿಚಾರದಲ್ಲಿ ನಾವು ಸರಕಾರದ ಪರವಾಗಿ ನಿಲ್ಲುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆಯೇ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದು ಡಬಲ್ ಇಂಜಿನ್ ಸರಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು? ಎಂದು ಅವರು ಪ್ರಶ್ನಿಸಿದರು.

ರಾಜ್ಯ ಸರಕಾರ ಕೋವಿಡ್ ವಿಚಾರದಿಂದ ಹಿಡಿದು ಜಿಎಸ್ಟಿ ವರೆಗೂ ಯಾವ ವಿಚಾರದಲ್ಲೂ ಸರ್ವಪಕ್ಷ ನಿಯೋಗ ಕರೆದೊಯ್ದಿಲ್ಲ. ಸರಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರಿಗೆ ಏನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಈಗ ಸರ್ವಪಕ್ಷ ನಿಯೋಗ ಏಕೆ ಬೇಕು? ನೀವು ಯೋಜನೆ ಆರಂಭಿಸಿ, ನಿಮ್ಮ ಜತೆ ನಾವು ನಿಲ್ಲುತ್ತೇವೆ ಎಂದು ಸರಕಾರಕ್ಕೆ ಹೇಳುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು. ಅದರ ಅಗತ್ಯ ಏನಿತ್ತು? ನಾವು ಸರಕಾರದ ಪರವಾಗಿ ಪತ್ರ ಬರೆದಾಗ ಅವರು ಏನು ಮಾಡಿದ್ದರು? ದಿಲ್ಲಿಯಲ್ಲಿ ನಿಮ್ಮದೇ ಸರಕಾರವಿದೆ, ನಿಮ್ಮದೇ ಅಧಿಕಾರವಿದೆ, ಅದನ್ನು ಬಳಸಿಕೊಂಡು ಯೋಜನೆ ಮಾಡಿ. ನಮ್ಮ ನಡುವೆ ರಾಜಕೀಯವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ಈ ವಿಚಾರದಲ್ಲಿ ಸರಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದ ಅವರು, ಇವರ ನಡಾವಳಿ ನೋಡಿದರೆ ಬಿಜೆಪಿ ಡಬಲ್ ಇಂಜಿನ್ ಸರಕಾರದ ಎರಡೂ ಇಂಜಿನ್‍ಗಳು ಫೇಲ್ ಆಗಿವೆ. ಈ ಇಂಜಿನ್ ಓಡಲು ಪೆಟ್ರೋಲ್, ಡೀಸೆಲ್ ಇಲ್ಲವಾಗಿದೆ ಎಂದು ಟೀಕಿಸಿದರು.

224 ಕ್ಷೇತ್ರಗಳಲ್ಲೂ ಗೆಲ್ಲುವ ಗುರಿ: ಇದಕ್ಕೆ ಮೊದಲು ದೇವನಹಳ್ಳಿ ವಿಧಾನಸಭೆ ಕ್ಷೇತ್ರದ ಅನ್ಯಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಿವಕುಮಾರ್, ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಯಾರೂ ಬೇಷರತ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿಯಲು ಬಯಸುತ್ತಾರೋ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾರ್ಯಕ್ರಮ ರೂಪಿಸಿ. ನಾನು ಅಥವಾ ಇತರ ನಾಯಕರನ್ನು ಆ ಕಾರ್ಯಕ್ರಮಕ್ಕೆ ಕಳುಹಿಸಿಕೊಡುತ್ತೇನೆ ಎಂದು ನಮ್ಮೂರ ನಾಯಕರಿಗೆ ಹೇಳಲು ಬಯಸುತ್ತೇನೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಗೆಲ್ಲಿಸಬೇಕು. ಅದೇ ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 130 ಕ್ಷೇತ್ರ ಗೆಲ್ಲುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುರಿ, ನಿಮ್ಮ ಗುರಿ ಏನು ಎಂದು ಮಾಧ್ಯಮದವರು ನನಗೆ ಪ್ರಶ್ನೆ ಮಾಡಿದರು. ನಾನು ಅದಕ್ಕೆ ರಾಜ್ಯದ 224 ಕ್ಷೇತ್ರಗಳೂ ನಮ್ಮ ಗುರಿ ಎಂದು ಹೇಳಿದೆ ಎಂದು ಅವರು ತಿಳಿಸಿದರು.
ನನ್ನ ಕ್ಷೇತ್ರದಲ್ಲಿ ಯಾರೋ ಬಿಜೆಪಿ ನಾಯಕರು ನಮ್ಮ ವಿರುದ್ಧ ಗೆಲ್ಲಲು ಪ್ರಯತ್ನಿಸಿದರೆ ತಪ್ಪಿಲ್ಲ. ದಳದವರು ಪ್ರಯತ್ನಿಸಿದರೆ ತಪ್ಪಿಲ್ಲ. ಹಾಗಂತ ನಾವು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಉಪ ಮುಖ್ಯಮಮಂತ್ರಿಗಳ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡಲು ಸಾಧ್ಯವೇ? ಅಲ್ಲಿ ನಾವ್ಯಾಕೆ ಗೆಲ್ಲಬಾರದು? ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ 224 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ಕೊಡುವ ಕೆಲಸ ಮಾಡುತ್ತೇವೆ. ಇದು ನಮ್ಮ ಗುರಿ ಎಂದು ಶಿವಕುಮಾರ್ ಹೇಳಿದರು.

ಇವತ್ತಿನಿಂದ ಇಲ್ಲಿ, ಹಳಬರು, ಹೊಸಬರು ಎಂಬ ಪ್ರಶ್ನೆ ಇಲ್ಲ. ಕಾಂಗ್ರೆಸ್ ದೇವಾಲಯಕ್ಕೆ ಬಂದು ಪಕ್ಷ ಸೇರಿರುವುದು ನಿಮ್ಮ ಭಾಗ್ಯ. ನಿಮ್ಮೆಲ್ಲರನ್ನೂ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಎಲ್ಲರೂ ಒಟ್ಟಾಗಿ ಜನರ ಸೇವೆ ಮಾಡಿ ಎಂದು ಶಿವಕುಮಾರ್ ಕರೆ ನೀಡಿದರು.

ದೇವನಹಳ್ಳಿ ಮುಖಂಡರಾದ ಚಿದಾನಂದ, ತುಂಗಭದ್ರಾ, ನಾಗರಾಜ್, ಮಂಜುನಾಥ್, ದೇವರಾಜ್, ಚೊಕ್ಕರೆಡ್ಡಿ, ರವಿ, ಬಸವರಾಜ್, ಪಿಳ್ಳಪ್ಪ, ಮುರಳೀಧರ ಮತ್ತಿತರ ನೂರಾರು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಮುನಿನರಸಿಂಹಯ್ಯ, ಚನ್ನಪ್ಪ, ತೂಬಗೆರೆ ರಂಗಪ್ಪ, ಶಾಂತರಾಜು ಮತ್ತಿತರ ಮುಖಂಡರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News