ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ: ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ
ಕೋಲಾರ, ಜುಲೈ 12 : ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತ. ಜನ ಸಂಖ್ಯೆ ಹೆಚ್ಚಾದರೆ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯಕರ ಸಮಾಜದ ಮೇಲೆ ಯಾವ ರೀತಿ ದೃಷ್ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ತಿಳಿಸಿದರು.
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಸಮಾಜದಲ್ಲಿ ತಾಯಿ-ಮಗು ಆರೋಗ್ಯ ಕಾಪಾಡಬೇಕಾದರೆ ಕುಟುಂಬ ಕಲ್ಯಾಣ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತದೆ, ಒಂದು ಕುಟುಂಬ ಆರೋಗ್ಯಕರವಾಗಿದ್ದರೆ ದೇಶ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಬಾಲ್ಯವಿವಾಹ ಒಂದು ಪಿಡುಗಾಗಿ ಕಾಡುತ್ತಿದ್ದು ಬಾಲ್ಯವಿವಾಹ ಮತ್ತು ಬಾಲ್ಯ ಗರ್ಭಧಾರಣೆಯಿಂದ ಅಪೌಷ್ಟಿಕ ಮಕ್ಕಳ ಜನನವಾಗಿ ಮಹಿಳೆಯರು ಅನೇಕ ತೊಂದರೆಗಳನ್ನು ಅನುಭವಿಸುವುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ಪ್ರಕರಣಗಳನ್ನು ದಾಖಲಿಸಿ ಎಂದು ಸೂಚಿಸಿದರು. ಗರ್ಭಧಾರಣೆಯಲ್ಲಿ ಲಿಂಗಾನು ಪತ್ತೆಯ ಬಗ್ಗೆ ಸ್ಕ್ಯಾನ್ ಸೆಂಟರ್ ಗಳಿಗೆ ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಭ್ರೂಣ ಹತ್ಯೆಯನ್ನು ತಡೆಯಬೇಕೆಂದು ಕರೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಚಂದನ್ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿಗಳಾದ ಡಾ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಐ.ಇ.ಸಿ ಕಾರ್ಡ್‍ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ, ಎಂ.ಕಮಲ, ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿರ್ಮೂಲನಾಧಿಕಾರಿ ಡಾ.ನಾರಾಯಣಸ್ವಾಮಿ, ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ವಿಜಯಕುಮಾರಿ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮ ರಾಜಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ದೇವಿ.ಹೆಚ್, ತಾಲೂಕು ವೈದ್ಯಾಧಿಕಾರಿ ರಮ್ಯಾ ದೀಪಿಕ ಮತ್ತಿತರರು ಉಪಸ್ಥಿತರಿದ್ದರು.