ಜನಸಂಖ್ಯಾ ನಿಯಂತ್ರಣದ ಬಗ್ಗೆ ರಾಜ್ಯದಲ್ಲೂ ನಿರ್ಣಯ ಕೈಗೊಳ್ಳಲು ಚರ್ಚಿಸಿ ತೀರ್ಮಾನ: ಸಚಿವ ಈಶ್ವರಪ್ಪ

Update: 2021-07-12 16:16 GMT

ಶಿವಮೊಗ್ಗ, ಜು.12: ಜಿಲ್ಲಾ ಹಾಗೂ ತಾಲೂಕು ಪಂಚಾಯಿತ್ ಚುನಾವಣೆ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದ್ದು, ಈ ಕುರಿತು ನಮ್ಮ ತಕರಾರಿಲ್ಲ. ಆದರೆ ಘೋಷಣೆಗೂ ಮುನ್ನ ಸೌಜನ್ಯಕ್ಕಾದರೂ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕಿತ್ತು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಸುವ ಹಕ್ಕು ಆಯೋಗಕ್ಕಿದೆ. ಅದನ್ನು ನಾವು ಪ್ರಶ್ನಿಸುವಂತಿಲ್ಲ. ಆದರೆ, ಸರ್ಕಾರದ ಸಲಹೆ ಪಡೆದಿದ್ದರೆ, ಮೀಸಲಾತಿ ಕುರಿತು ಕೆಲವು ಮಾರ್ಗಸೂಚಿಗಳನ್ನು ಹೇಳುವ ಅವಕಾಶವಿತ್ತು. ಮೀಸಲಾತಿ ಘೋಷಣೆ ಸಂಬಂಧ ಅನೇಕರು ಈಗಾಗಲೇ ಅಪಸ್ವರವೆತ್ತಿದ್ದಾರೆ. ಈ ಕುರಿತು ಆಯೋಗ ತೀರ್ಮಾನ ತೆಗೆದುಕೊಳ್ಳಬೇಕಿದೆ. ಆಯೋಗದ ತೀರ್ಮಾನಕ್ಕೆ ಅಸಮಾಧಾನವಿದ್ದಲ್ಲಿ ಕೋರ್ಟ್ ಮೊರೆ ಹೋಗಬಹುದು ಎಂದರು.

ಕೋವಿಡ್ ಕಾರಣ ಡಿಸೆಂಬರ್ ವರೆಗೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಸರ್ಕಾರ ಸೂಚಿಸಿತ್ತು. ಆದರೂ, ಘೋಷಣೆಯಾಗಿದೆ. ನಮ್ಮ ಪಕ್ಷ ಚುನಾವಣೆಗೆ ಸಜ್ಜಾಗಿದ್ದು, ಉತ್ತರ ಪ್ರದೇಶ ಮಾದರಿಯಲ್ಲಿ ಎಲ್ಲಾ ಜಿ.ಪಂ ಕ್ಷೇತ್ರಗಳಲ್ಲೂ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಜನತೆಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದರು.

ಜನಸಂಖ್ಯಾ ನಿಯಂತ್ರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ನಿರ್ಣಯ ಸಕಾಲಿಕವಾಗಿದೆ. ನಮ್ಮ ರಾಜ್ಯದಲ್ಲೂ ಈ ಕುರಿತು ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News