ಮೈಸೂರು ರಾಜ ವಂಶಸ್ಥರ ಹೆಸರಿನಲ್ಲಿ ವಂಚನೆ: ಓರ್ವನ ಸೆರೆ

Update: 2021-07-12 16:29 GMT

ಬೆಂಗಳೂರು, ಜು.12: ಆನ್‍ಲೈನ್ ಮೂಲಕ ಯುವತಿಯರನ್ನು ಸಂಪರ್ಕಿಸಿ ಮೈಸೂರು ಅರಸರ ಕುಟುಂಬದ ಸಂಬಂಧಿ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ವೈಟ್‍ಫೀಲ್ಡ್ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಸಿದ್ದಾರ್ಥ ಯಾನೆ ಸ್ಯಾಂಡಿ(33) ಬಂಧಿತ ಆರೋಪಿಯಾಗಿದ್ದು, ಈತನಿಂದ ಐಫೋನ್ ಸೇರಿದಂತೆ ಮೂರು ದುಬಾರಿ ಫೋನ್‍ಗಳು, ಎಸ್‍ಬಿಐ, ಕೋಟ್ ಮಹೀಂದ್ರ, ಎಚ್‍ಡಿಎಫ್‍ಸಿ ಬ್ಯಾಂಕ್‍ನ ಕ್ರೆಡಿಟ್ ಕಾರ್ಡ್, ಆಕ್ಸಿಸ್ ಬ್ಯಾಂಕ್‍ನ ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆನ್‍ಲೈನ್ ಮೂಲಕ ಸಂಗಂ ಮ್ಯಾಟ್ರೊಮನಿ ಮತ್ತು ಕನ್ನಡ ಮ್ಯಾಟ್ರೊಮನಿ ಎಂಬ ವೆಬ್‍ಸೈಟ್‍ಗಳಲ್ಲಿ ಮೈಸೂರು ಅರಸರ ಕುಟುಂಬದ ಸಂಬಂಧಿ ಎಂದು ಹೇಳಿಕೊಂಡು ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಆರೋಪಿ ಭಾವಚಿತ್ರವನ್ನು ಯುವತಿಯರಿಗೆ ಕಳುಹಿಸಿ ಸ್ಪ್ಯಾನಿಸ್ ಹಾಗೂ ಯುಎಸ್ ಇಂಗ್ಲಿಷ್‍ನಲ್ಲಿ ಮಾತನಾಡಿ ನಂಬಿಸುತ್ತಿದ್ದ. ನಂಬಿಕೆಗೆ ಒಳಗಾದ ಯುವತಿಯರಿಂದ ಹಂತ ಹಂತವಾಗಿ ಆನ್‍ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿಯ ವಿರುದ್ಧ ಈಶಾನ್ಯ, ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಿಸಿದ್ದು, ಲಕ್ಷಾಂತರ ರೂ.ಗಳ ವಂಚನೆ ಮಾಡಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News