ಮೈಸೂರು: ಹೆರಿಟೇಜ್ ಗಾಲ್ಫ್ ಪ್ರೈಲಿ ಕಂಪೆನಿಯಿಂದ ವಂಚನೆ ಆರೋಪ: ನ್ಯಾಯಕ್ಕಾಗಿ ರೈತರ ಪ್ರತಿಭಟನೆ

Update: 2021-07-12 17:54 GMT

ಮೈಸೂರು,ಜು.12: ಹೆರಿಟೇಜ್ ಗಾಲ್ಫ್ ಪ್ರೈ.ಲಿ.ಕಂಪನಿಯಿಂದ ವಂಚನೆಗೆ ಒಳಗಾದ ರೈತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕೋಚನಹಳ್ಳಿ ರೈತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಕರ್ನಾಟಕ ರಾಜ್ಯ ರೈತ ಸಂಘ, ಎಐಯುಟಿಯುಸಿ, ಸ್ವರಾಜ್ ಅಭಿಯಾನ, ದಲಿತ ಸಂಘರ್ಷ ಸಮಿತಿ, ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮಾತನಾಡಿ ಭೂಮಿ ಕಳೆದುಕೊಂಡ ಪ್ರತಿಯೊಂದು ಕುಟುಂಬಕ್ಕೂ ಹೆರಿಟೇಜ್ ಗಾಲ್ಫ್ ಪ್ರೈ ಲಿಮಿಟೆಡ್ ಕಂಪನಿಯು ಕಂಪನಿಯ ಹೆಸರಿನಲ್ಲೇ ರೈತರಿಗೆ ವಂಶ ಪಾರಂಪರ್ಯ ಖಾಯಂ ಉದ್ಯೋಗ ನೀಡುವ ಭರವಸೆ ಪತ್ರ ಮತ್ತು ನೇಮಕಾತಿ ಪತ್ರಗಳನ್ನು ನೀಡಿದೆ. ಆದರೆ ರೈತರಿಂದ ಖರೀದಿಸಿದ ಭೂಮಿಯನ್ನು ಕಂಪನಿಯ ನಿರ್ದೇಶಕರ, ಷೇರುದಾರರ(ಬೇನಾಮಿ ಹೆಸರುಗಳಲ್ಲಿ) ವೈಯಕ್ತಿಕ ಹೆಸರಿನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಕೆಲವು ರೈತರು ಇದನ್ನು ಪ್ರಶ್ನಿಸಿದಾಗ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ನಮ್ಮ ಕಂಪನಿಯ ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಹೆಸರಿನಲ್ಲಿ ತಾತ್ಕಾಲಿಕವಾಗಿ ಖಾತೆ ಮಾಡಿಸಿಕೊಳ್ಳುವುದಾಗಿ ಸಮಜಾಯಿಷಿ ನೀಡಿದ್ದರು. ಆದರೆ ಭೂಮಿ ಪಡೆದ ಕಂಪನಿ ಯಾವುದೇ ಚಟುವಟಿಕೆಗಳನ್ನು ಮಾಡದೆ ಸುಮ್ಮನಾಯಿತು ಎಂದು ಆರೋಪಿಸಿದರು.

ಭೂಮಿ ನೀಡಿದವರಿಗೆ ಕೆಲಸ ನೀಡುವಂತೆ ಒತ್ತಾಯಿಸಿದಾಗ ಅದೇ ಜಮೀನಿನಲ್ಲಿ  ಕೂಲಿಯಾಳುಗಳಾಗಿ ಗಿಡಗಂಟಿ ಕೀಳು ಕೆಲಸ ಮಾಡಿಸಿದರು. ಒಂದೆರಡು ವರ್ಷ ವೇತನ ನೀಡಿ ಬಳಿಕ ವೇತನ ನೀಡಿಲ್ಲ. ಕಂಪನಿಯು ಪ್ರಾರಂಭವಾಗುವ ಮುನ್ನವೇ ಮುಚ್ಚಿ ಹೋಗಿತ್ತು. ಕೆಐಎಡಿಬಿ ಇದೀಗ ಈ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. 

ಮುಂದೆ ಬರುವ ಕೈಗಾರಿಕೆಗಳಲ್ಲಿ ಮೂಲ ರೈತರಿಗೆ ಉದ್ಯೋಗ ನೀಡುವ ಭರವಸೆಯನ್ನು ಸರ್ಕಾರ ನೀಡಬೇಕು. ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ 189ಎಕ್ರೆ ಭೂಮಿಗೆ ಬೇನಾಮಿ ಹಣ ಪಡೆದಿದ್ದು ಅದನ್ನು ರೈತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ಬಾಕಿ ಉಳಿದಿರುವ ಭೂಮಿಯನ್ನು ಸಂಬಂಧಪಟ್ಟ ರೈತರಿಗೆ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News