ಮೈಶುಗರ್ ಖಾಸಗೀಕರಣಕ್ಕಾಗಿ ಬಿಎಸ್ಸೈ ಕುಟುಂಬಕ್ಕೆ ಕಪ್ಪು ಹಣ: ಆಮ್ ಆದ್ಮಿ ಪಕ್ಷ ಆರೋಪ

Update: 2021-07-12 18:04 GMT

ಬೆಂಗಳೂರು, ಜು.12: ಮೈಶುಗರ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ನಿರ್ಧಾರ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬಕ್ಕೆ ಕಪ್ಪು ಹಣ ಸೇರಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದರು.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಪ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ರೈತರಿಗಾಗಿ ಆರಂಭಿಸಿದ ಮೈಶುಗರ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದೆ. ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಕ್ಕಳು, ಕುಟುಂಬ ಸದಸ್ಯರು ಆಂಧ್ರ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ್ದು, ಖಾಸಗೀಕರಣದ ನಂತರ ಭಾರೀ ಪ್ರಮಾಣದ ಕಪ್ಪುಹಣವನ್ನು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ ಎಂದು ದೂರಿದರು.

ಮೈಶುಗರ್ ಗಾಗಿ ಆಪ್ ಪಕ್ಷವೂ 2016ರಲ್ಲೆ ಬೃಹತ್ ರ್ಯಾಲಿ ನಡೆಸಿದ್ದು, ಈಗ ಅದರ ಖಾಸಗೀಕರಣವನ್ನು ನೋಡಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದ ಅವರು, ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ. ಸರಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಯಡಿಯೂರಪ್ಪ ಹೇಳಿದ್ದರು.ಆದರೆ, ಈಗ ಬದಲಾವಣೆಗೆ ಕಾರಣವೇನು ಎಂದು ಪ್ರಶ್ನಿಸಿದರು.

1933ರಲ್ಲಿ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಲಾಯಿತು. ಇದನ್ನು ರಾಜ್ಯದ ಮೊದಲ ಕಾರ್ಖಾನೆ ಎಂದು ಗೌರವದಿಂದ ಕಾಣಲಾಗುತ್ತದೆ. ಸ್ವಾತಂತ್ರ್ಯ ಬಂದು 73 ವರ್ಷವಾದರೂ ರಾಜ್ಯವನ್ನು ಆಳಿದ ಯಾವ ಮುಖ್ಯಮಂತ್ರಿಗೂ ಇಂತಹ ಮತ್ತೊಂದು ಕಾರ್ಖಾನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ನಾಡಿನ ರೈತರ ಬದುಕನ್ನು ಸುಧಾರಿಸುವುದರಲ್ಲಿ ಮೈಶುಗರ್ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ಸಿಂಧು ಮಳವಳ್ಳಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News