×
Ad

ಚಿತ್ರದುರ್ಗ: ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಮೃತ್ಯು; ಇಬ್ಬರು ಗಂಭೀರ

Update: 2021-07-13 12:56 IST

ಚಿತ್ರದುರ್ಗ, ಜು.13: ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟು, ಇಬ್ಬರು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭರಮಸಾಗರ ಸಮೀಪದ ಇಸಾಮುದ್ರ ಗ್ರಾಮದ ಲಂಬಾಣಿಹಟ್ಟಿ ಸೋಮವಾರ ನಡೆದಿದೆ.

ತಿಪ್ಪನಾಯ್ಕ (45),  ಅವರ ಪತ್ನಿ ಸುಧಾಬಾಯಿ (40) ಹಾಗೂ ಗುಂಡಿಬಾಯಿ (80) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮಕ್ಕಳಾದ ರಾಹುಲ್ (19) ಮತ್ತು ರಮ್ಯಾ(16) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಕುಟುಂಬದ ಸದಸ್ಯರೆಲ್ಲರೂ ಸೋಮವಾರ ರಾತ್ರಿ ಮುದ್ದೆ ಸಾರು ಉಂಡು 10 ಗಂಟೆ ಸುಮಾರಿಗೆ ಮಲಗಿದ್ದರೆನ್ನಲಾಗಿದೆ. ಆದರೆ ರಾತ್ರಿ ಸುಮಾರು 11:30ಕ್ಕೆ ವಾಂತಿ ಮಾಡಲಾರಂಭಿಸಿದರಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ನೆರೆಹೊರೆಯವರು ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದಾರಿಮಧ್ಯೆ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News