ಶೃಂಗೇರಿ ಬ್ಯೂಟಿ ಪಾರ್ಲರ್ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ನಾಲ್ವರು ಆರೋಪಿಗಳ ಆರೋಪ ಸಾಬೀತು
ಚಿಕ್ಕಮಗಳೂರು, ಜು.13: ಆರು ವರ್ಷಗಳ ಹಿಂದೆ ಶೃಂಗೇರಿ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ನಾಲ್ವರು ಆರೋಪಿಗಳ ಮೇಲಿದ್ದ ಆರೋಪ ಜಿಲ್ಲಾ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಜು.15ರಂದು ಶಿಕ್ಷೆಯ ಪ್ರಮಾಣ ತೀರ್ಪು ಹೊರಬೀಳಲಿದೆ.
2015ರ ಎಪ್ರಿಲ್ 18ರಂದು ಶೃಂಗೇರಿಯಲ್ಲಿ ಯುವತಿಯೊಬ್ಬಳ ಮೇಲೆ ಗಣೇಶ್, ಕಬೀರ್, ಮಜೀದ್ ಹಾಗೂ ಪಾಲ್ ಪಿಂಟೋ ಎಂಬವರು ಆ್ಯಸಿಡ್ ಎರಚಿರುವ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಶೃಂಗೇರಿ ಪೊಲೀಸ್ ಠಾಣಾಧಿಕಾರಿ ಸುಧೀರ್ ಹೆಗ್ಡೆ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂದಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ತೀರ್ಪಿತ್ತಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಜು.15ರಂದು ಘೋಷಿಸಲಿದ್ದಾರೆ. ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
ಸರಕಾರಿ ಅಭಿಯೋಜಕಿ ಮಮತಾ ವಾದ ಮಂಡಿಸಿದ್ದರು.
ಆರೋಪಿ ಗಣೇಶ್ ಬ್ಯೂಟಿ ಪಾರ್ಲರ್ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆ ಪ್ರೀತಿಯನ್ನು ನಿರಾಕರಿಸಿದಕ್ಕೆ ಸ್ನೇಹಿತರ ಜತೆ ಸೇರಿ ಈ ಕೃತ್ಯ ಎಸಗಿದ್ದನೆನ್ನಲಾಗಿದೆ.