×
Ad

ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ: ಜಿ.ಪಂ ನೂತನ ಸಿಇಒ ಜಿ.ಪ್ರಭು

Update: 2021-07-13 17:55 IST

ಚಿಕ್ಕಮಗಳೂರು, ಜು.13: ಬೌಗೋಳಿಕವಾಗಿ ಭಿನ್ನ ಭೂ ಪ್ರದೇಶವನ್ನು ಹೊಂದಿರುವ ಜಿಲ್ಲೆಯಲ್ಲಿ ಸರಕಾರದ ಯೋಜನೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮರ್ಪಕ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.

ಮಂಗಳವಾರ ಜಿಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಲೆನಾಡು ಹಾಗೂ ಬಯಲು ಭಾಗದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಇದ್ದು, ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಹೊಂದಿದ್ದು, ಸರಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಯಾವ ಯಾವ ಯೋಜನೆಗಳು ಅನುಷ್ಠಾನಗೊಳ್ಳಬೇಕು, ಯಾವ ಯೋಜನೆಗಳು ಯಾವ ಹಂತದಲ್ಲಿವೆ, ಎಷ್ಟು ಕಾಮಗಾರಿಗಳು ಬಾಕಿ ಇವೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
 
ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ. ಸದ್ಯದಲ್ಲೆ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಅನೇಕ ಯೋಜನೆಗಳು ಅನುಷ್ಠಾನಗೊಂಡಿದ್ದು, ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಜಲಜೀವನ್ ಮಿಷನ್ ಯೋಜನೆಯಡಿ ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ಮನೆ ಮನೆಗೂ ತಲುಪಿಸಲಾಗುವುದು. ಈ ಸಂಬಂಧದ ಯೋಜನಾ ವರದಿ ತಯಾರಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ನಗರ ಪ್ರದೇಶದಲ್ಲಿನ ಘನತ್ಯಾಜ್ಯ ನಿರ್ವಹಣೆ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಸ್ವಚ್ಛಭಾರತ್ ಯೋಜನೆ ಅನುಷ್ಠಾನದ ಹಂತದಲ್ಲಿದ್ದು, ಹಂತ ಹಂತವಾಗಿ ಗುರುತರವಾದ ಕಾಮಗಾರಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಯಲಿವೆ. ಜಿಪಂ ವ್ಯಾಪ್ತಿಯಲ್ಲಿ 28 ಇಲಾಖೆಗಳು ಕಾರ್ಯನಿರ್ವಹಿಸಲಿದ್ದು, ಇಲಾಖೆಯಿಂದ ಅನುಷ್ಠಾನಗೊಂಡ ಯೋಜನೆಗಳು  ಯಾವ ಹಂತದಲ್ಲಿವೆ, ಯೋಜನೆಗಳಿಗೆ ಚುರುಕು ಮುಟ್ಟಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆಗಳಿಗೆ ಚುರುಕು ಮುಟ್ಟಿಸಲಾಗುವುದು. ಗ್ರಾಮ ಪಂಚಾಯತ್‍ಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತೀ ಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡಿ ಗ್ರಾಪಂ ಅಧಿಕಾರಿಗಳನ್ನು ಎಚ್ಚರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸರಕಾರ ಯೋಜನೆಗಳನ್ನು ಅಮರ್ಪಕವಾಗಿ ಅನುಷ್ಠಾನಕ್ಕೆ ತರಲು ಮತ್ತು ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ತನ್ನದೆಯಾದ ಯೋಜನೆ ರೂಪಿಸಿಕೊಂಡಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು. ಸಾರ್ವಜನಿಕರು ತಮ್ಮ ಗ್ರಾಮದ ಸಮಸ್ಯೆಗಳನ್ನು ಮುಕ್ತವಾಗಿ ತಮ್ಮೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಇದೇ ವೇಳೆ ನೂತನ ಜಿಪಂ ಸಿಇಒ ಜಿ.ಪ್ರಭು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News