ಹಾಸನ: ಅಪಘಾತ ಪ್ರಕರಣ; ಜಿಯೋ ಕಚೇರಿ ಎದುರು ಮೃತದೇಹವಿಟ್ಟು ಮೃತನ ಸಂಬಂಧಿಕರ ಪ್ರತಿಭಟನೆ

Update: 2021-07-13 14:27 GMT

ಹಾಸನ,ಜು.13: ಕೆಲಸದ ವೇಳೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಓರ್ವನಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ನಗರದ ಎಂ.ಜಿ. ರಸ್ತೆ ಬಳಿ ಇರುವ ಜಿಯೋ ಮುಖ್ಯ ಕಚೇರಿ ಎದುರು ಸಂಬಂಧಿಕರು ಮತ್ತು ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ ಘಟನೆ ನಡೆದಿದೆ.

ಜಾವಗಲ್ ಹಾಗೂ ಬಾಣವಾರ ಹೋಬಳಿಯ ಜಿಯೋ ಕಂಪೆನಿಯ ಟವರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸ್ವಾಮಿ (33) ವರ್ಷ ಎಂಬುವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ದಿನನಿತ್ಯದ ಕಂಪೆನಿ ಕೆಲಸ ಮಾಡಲು ಹೋಗುತ್ತಿದ್ದಾಗ ಜಾವಗಲ್ ಬಳಿ ಬೈಕ್ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಸ್ವಾಮಿ ಸ್ಥಳದಲ್ಲಿಯೆ ಸಾವನಪ್ಪಿದ್ದಾರೆ. ನಂತರ ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸೇರಿ ನಗರದ ಎಂ.ಜಿ. ರಸ್ತೆಯ ಜಿಯೋ ಕಚೇರಿ ಮುಂದೆ ಮೃತನ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕರ್ತವ್ಯದ ವೇಳೆ ಮೃತಪಟ್ಟಿದ್ದರೂ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಬಿಜೆಪಿ ಮುಖಂಡರಾದ ಪುನಿತ್ ಮತ್ತು ಉದ್ದೂರು ಪುರುಷೋತ್ತಮ ಆಗಮಿಸಿ ಜಿಯೋ ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡಿ ಮೃತಪಟ್ಟ ನೌಕರನಿಗೆ ಕಂಪೆನಿಯ ವಿಮೆ ಪಡೆಯಲು ಅವಕಾಶ ಕಲ್ಪಿಸಿಕೊಡುವ ಬಗ್ಗೆ ಮಾತುಕತೆ ನಡೆಸಿ 10 ಲಕ್ಷ ರೂ.ಪರಿಹಾರ ಕೊಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆ ವೇಳೆ ಜಿಯೋ ಕಟ್ಟಡದ ಮುಂಭಾಗದಲ್ಲಿ ಮೃತದೇಹ ಇಡುವ ವಿಚಾರಕ್ಕೆ ಪ್ರತಿಭಟನಾಕಾರರನ್ನು​ ಪೊಲೀಸರು ಚದುರಿಸಬೇಕಾಯಿತು. ಮುನ್ನೆಚ್ಚೆರಿಕಾ ಕ್ರಮವಾಗಿ ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News