×
Ad

ಜನರ ಹೊರತು ಬೇರೆ ಯಾರಿಗೂ ನನ್ನ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ: ಜೆಡಿಎಸ್ ಮುಖಂಡರ ವಿರುದ್ಧ ಸುಮಲತಾ ವಾಗ್ದಾಳಿ

Update: 2021-07-13 20:09 IST

ಮಂಡ್ಯ, ಜು.12: ನಾನು ಈ ಮಣ್ಣಿನ ಸೊಸೆ. ಜನರ ಹೊರತು ಬೇರೆ ಯಾರೂ ನಾನು ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಮತ್ತೆ ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೆಜ್ಜಲಗೆರೆ ಮನ್‍ಮುಲ್ ಬಳಿ ನಡೆದ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ಅವರು, ನನ್ನಲ್ಲಿ ತಪ್ಪು ಇದ್ದರೆ ಮುಲಾಜಿಲ್ಲದೆ ಹೇಳಿ, ತಿದ್ದುಕೊಳ್ಳುತ್ತೇನೆ. ನಿಮ್ಮಗಳಿಂದ ರಾಜಕೀಯಕ್ಕೆ ಬಂದಿದ್ದೇನೆ. ನೀವು ಬೇಡ ಅಂದರೆ ಬರುವುದಿಲ್ಲ. ನಾನು ಈ ಮಣ್ಣಿನ ಸೊಸೆ, ಮಾತಾಡೋಕ್ಕೆ ತಡೆಯಲು ಬೇರೆ ಯಾರಿಂದಲೂ ಆಗಲ್ಲ ಎಂದು ಗುಡುಗಿದರು.

ರೈತರ ಆತ್ಮಹತ್ಯೆ ಆತ್ಮಹತ್ಯೆ ಅಲ್ಲ, ಅದು ಹತ್ಯೆ. ಆದ್ದರಿಂದ ರೈತರು ಏನೇ ಕಷ್ಟಬಂದರೂ ಆತ್ಮಹತ್ಯೆ ಹಾದಿ ಹಿಡಿಯಬೇಡಿ, ಧೈರ್ಯದಿಂದ ಹೋರಾಡಿ ನ್ಯಾಯ ಪಡೆಯೋಣ. ರೈತರ ಸಾವಿನ ಮನೆಗೆ ಹೋಗಿ ಒಂದಷ್ಟು ಚಿಲ್ರೆ ಕಾಸು ಕೊಟ್ಟು ಸಾಂತ್ವನ ಹೇಳಿ ಪಬ್ಲಿಸಿಟಿ ತೆಗೆದುಕೊಳ್ಳುವುದು ಮುಖ್ಯವಲ್ಲ, ಅದನ್ನು ತಡೆಯಲು ಏನು ಮಾಡಬೇಕು ಎನ್ನುವುದು ಮುಖ್ಯ ಎಂದು ಅವರು ಹೇಳಿದರು.
ಅಕ್ರಮ ಗಣಿಗಾರಿಕೆ ವಿಚಾರ ಎತ್ತಿರುವುದು ದುಡ್ಡು ಮಾಡಕ್ಕಲ್ಲ. ಕೆಆರ್ಎಸ್ ಡ್ಯಾಂ ಬಿರುಕುಬಿಟ್ಟಿದೆ ಎಂದೂ  ನಾನು ಹೇಳಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿನ ಸ್ಫೋಟಕದಿಂದ ಡ್ಯಾಂಗೆ ತೊಂದರೆ ಇದೆ ಎಂದು ಹೇಳಿದ್ದೇನೆ. ಈ ಸಂಬಂಧ ರೈತ ನಾಯಕ ಪುಟ್ಟಣ್ಣಯ್ಯ ಅವರೂ ಹೋರಾಡಿದ್ದಾರೆ ಎಂದು ಅವರು ತನ್ನ ಹೋರಾಟ ಸಮರ್ಥಿಸಿಕೊಂಡರು.

ನಾನೇ ಏನೇ ಮಾತಾಡಿದರೂ ಅದಕ್ಕೆ ರಾಜಕೀಯ ಬಣ್ಣ ಬಳಿಯುವ ಯತ್ನ ನಡೆಯುತ್ತೆ. ಇದು ನಾನು ಚುನಾವಣೆಗೆ ನಿಂತಲ್ಲಿದಲೂ ನಡೆದುಕೊಂಡು ಬರುತ್ತಿದೆ ಬಿಡಿ. ಸುಮಲತಾಗೆ ರಾಜಕಾರಣ ಹೊಸತು ಇರಬಹುದು, ಹಂತಹಂತವಾಗಿ ಕಲಿಯುತ್ತೇನೆ. ಆದರೆ, ಭ್ರಷ್ಟಾಚಾರ ಹೊಸತು ಎಂದು ಅವರು ಪರೋಕ್ಷವಾಗಿ ದಳಪತಿಗಳಿಗೆ ತಿರುಗೇಟು ನೀಡಿದರು.

ಅಕ್ರಮ ಗಣಿಗಾರಿಕೆ, ಕಾವೇರಿ ನೀರು, ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ಸಂಸತ್‍ ನಲ್ಲಿ ಹಲವಾರು ಬಾರಿ ಮಾತನಾಡಿದ್ದೇನೆ. ಮುಂದೆಯೂ ಮಾತನಾಡುತ್ತೇನೆ. ನನ್ನ ಗೆಲುವಿನಲ್ಲಿ ರೈತಸಂಘದ ಪಾತ್ರ ಮರೆಯಲು ಸಾಧ್ಯವಿಲ್ಲ. ಸದಾ ನಿಮ್ಮಗಳ ಹೋರಾಟದಲ್ಲಿ ಇರುತ್ತೇನೆ ಎಂದು ಅವರು ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News