ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಕ್ಕೆ ತಿದ್ದುಪಡಿ
ಬೆಂಗಳೂರು, ಜು.13: ಅನುಕಂಪದ ಆಧಾರದ ಮೇಲಿನ ಸರಕಾರಿ ನೌಕರಿ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಈ ಹಿಂದೆ ಸರಕಾರಿ ನೌಕರ, ನೌಕರಳು ಮೃತರಾಗಿದ್ದಲ್ಲಿ ಆ ವ್ಯಕ್ತಿ ಮೇಲೆ ಅವಲಂಬಿತರಾಗಿದ್ದ ಅವರ ಮಗ ಅಥವಾ ಅವಿವಾಹಿತ ಮಗಳಿಗೆ ಮಾತ್ರ ಅನುಕಂಪದ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ತಿದ್ದುಪಡಿ ನಿಯಮಗಳನ್ವಯ ಸರಕಾರಿ ನೌಕರ, ನೌಕರಳು ಮೃತರಾಗಿದ್ದಲ್ಲಿ ಆ ವ್ಯಕ್ತಿ ಮೇಲೆ ಅವಲಂಬಿತರಾಗಿದ್ದ ಅವಿವಾಹಿತ, ವಿವಾಹಿತ, ವಿಚ್ಛೇದಿತ, ವಿಧವೆ ಮಗಳಿಗೂ ಅನುಕಂಪದ ನೇಮಕಾತಿಗೆ ಅವಕಾಶ ದೊರಕಿಸಿಕೊಡಲಾಗಿದೆ.
ಅದೇ ರೀತಿ, ಸರಕಾರಿ ನೌಕರರು ಮೃತರಾದರೆ ಅವರಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಾಗ ಆ ಮಕ್ಕಳು ನೌಕರರು ಮರಣ ಹೊಂದಿದ ವರ್ಷದೊಳಗೆ ಪ್ರಾಪ್ತ ವಯಸ್ಕರಾದಲ್ಲಿ (18 ವರ್ಷ ಪೂರೈಸಿದರೆ) ನಂತರ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿ ಅನುಕಂಪದ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ನಿಯಮವನ್ನು ಸಹ ತಿದ್ದುಪಡಿ ಮಾಡಲಾಗಿದೆ.
ಅದರಂತೆ, ನೌಕರರಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದಲ್ಲಿ ಎರಡು ವರ್ಷದೊಳಗೆ 18 ವರ್ಷ ಪೂರೈಸಬೇಕು ಮತ್ತು ಅವರಿಗೆ ಎರಡು ವರ್ಷದೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು, ಒಂದು ವೇಳೆ ಪೋಷಕರಿಬ್ಬರು ಮರಣ ಹೊಂದಿದ ಸಂದರ್ಭದಲ್ಲಿ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ಪಕ್ಷದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೊಂದಿಗೆ ವಾಸವಿರುವ ಮತ್ತು ಅವರನ್ನು ಪೋಷಿಸುವ ಪ್ರಮಾಣೀಕೃತ ಪೋಷಕರಿಗೂ (ಗಾರ್ಡಿಯನ್) ಸಹ ಅನುಕಂಪದ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ.
ಇದೇ ವಾರ್ಷಿಕ ಸಾಲಿನ ಎಪ್ರಿಲ್ ಮಾಸದಲ್ಲಿ (ಕರ್ನಾಟಕ ಸಿವಿಲ್ ಸೇವಾ ಅನುಕಂಪದ ಆಧಾರದ ಮೇಲೆ) ನಿಯಮಗಳು 1996ಕ್ಕೆ ತಿದ್ದುಪಡಿ ತಂದು ಮೃತ ಸರಕಾರಿ ನೌಕರರ ಕುಟುಂಬಸ್ಥರಿಗೆ ಸರಕಾರ ಅನುಕೂಲ ಕಲ್ಪಿಸಿದೆ ಎಂದು ಪ್ರಕಟನೆ ತಿಳಿಸಿದೆ.