×
Ad

ಅಕ್ರಮ ಕೇಬಲ್ ಹಾಕಿದರೂ ಫುಟ್‍ಪಾತ್ ಒತ್ತುವರಿ: ಹೈಕೋರ್ಟ್

Update: 2021-07-13 22:05 IST

ಬೆಂಗಳೂರು, ಜು.13: ಬೆಂಗಳೂರಿನ ರಸ್ತೆಗಳ ಇಕ್ಕೆಲಗಳಲ್ಲಿ ಇಂಟರ್ ನೆಟ್, ಕೇಬಲ್ ವೈರ್ ಗಳನ್ನು ನೇತು ಹಾಕಿರುವುದು ಕೂಡ ಪಾದಚಾರಿ ಮಾರ್ಗದ ಒತ್ತುವರಿ ಆಗಲಿದೆ ಎಂದಿರುವ ಹೈಕೋರ್ಟ್, ಅವುಗಳನ್ನು ತೆರವುಗೊಳಿಸುವ ಕುರಿತು ಜು.19ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ.

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾದ ಕೂಡಲೇ ಸಿಜೆ, ಕಳೆದ ವಿಚಾರಣೆ ವೇಳೆಯೇ ಜನಸಾಮಾನ್ಯರ ಓಡಾಟಕ್ಕೆ ತೊಂದರೆ ಮಾಡುತ್ತಿರುವ ಕೇಬಲ್ ವೈರ್‍ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಪಾಲಿಕೆ ಪರ ವಕೀಲರು, ಎರಡು ವಲಯಗಳಲ್ಲಿ ಕೇಬಲ್ ತೆರವು ಕಾರ್ಯ ನಡೆದಿದೆ. ಉಳಿದ ಆರು ವಲಯಗಳಲ್ಲಿ ತೆರವುಗೊಳಿಸುವ ಕಾರ್ಯ ಕೈಗೊಂಡು ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿದರು. 
ಅದಕ್ಕೆ ನ್ಯಾಯಪೀಠ, ಇಲ್ಲ ಎಲ್ಲೂ ತೆರವಾಗಿಲ್ಲ. ಪಾಲಿಕೆ ಕೇಬಲ್‍ಗಳ ತೆರವು ನಿಟ್ಟಿನಲ್ಲಿ ಏನೊಂದು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಕೇಬಲ್ ಹಾಕಿರುವುದು ಕೂಡ ಪಾದಚಾರಿಮಾರ್ಗದ ಒತ್ತುವರಿಯಾಗಲಿದೆ. ಹೀಗಾಗಿ, ಈಗಾಗಲೇ ನ್ಯಾಯಾಲಯ ಪಾದಚಾರಿ ಮಾರ್ಗ ಒತ್ತುವರಿ ತೆರವು ಸಂಬಂಧ ಹೊರಡಿಸಿರುವ ಆದೇಶ ಆಧರಿಸಿ ಹೊಸದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿತು. 

ಸಾರ್ವಜನಿಕ ಜೀವಕ್ಕೆ ಅಪಾಯ ಒದಗಿರುವ ಕೇಬಲ್ ಮತ್ತು ಇಂಟರ್ನೆಟ್ ಸಂಪರ್ಕದ ಕೇಬಲ್‍ಗಳನ್ನು ಅಕ್ರಮವಾಗಿ ಅಳವಡಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಪೀಠಕ್ಕೆ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News