ಅರೆ ನ್ಯಾಯಿಕ ಕೋರ್ಟ್‍ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಿ: ಹೈಕೋರ್ಟ್ ನಿರ್ದೇಶನ

Update: 2021-07-13 16:37 GMT

ಬೆಂಗಳೂರು, ಜು.13: ಕಂದಾಯ ನ್ಯಾಯಾಲಯ ಸೇರಿ ಅರೆ ನ್ಯಾಯಿಕ ಕೋರ್ಟ್ ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ಎಂ.ನಾಗರಾಜ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಪೀಠ, ಲಾಕ್‍ಡೌನ್ ನಂತರ ತಹಸೀಲ್ದಾರ್, ಸಹಾಯಕ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಕೋರ್ಟ್ ಸೇರಿ ಅರೆ ನ್ಯಾಯಿಕ ಕೋರ್ಟ್‍ಗಳಲ್ಲಿ ಪ್ರಕರಣಗಳ ವಿಚಾರಣೆಯಾಗದೇ ಬಾಕಿ ಉಳಿದಿವೆ. ಕಂದಾಯ ನ್ಯಾಯಾಲಯಗಳಲ್ಲಿ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಇದರಿಂದ ಜನಸಾಮಾನ್ಯರ ಭೂಮಿ ವಿವಾದ, ಪಹಣಿ, ಖಾತಾ, ಮ್ಯುಟೇಷನ್ ವಿವಾದಗಳು ಇತ್ಯರ್ಥವಾಗದೇ ಉಳಿದಿದ್ದವು. ಹೀಗಾಗಿ, ಇಂಥ ಕೋರ್ಟ್‍ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರೆ ಜನಸಾಮಾನ್ಯರಿಗೆ ಖಾತೆ, ಮ್ಯುಟೇಷನ್ ವಿವಾದಗಳಲ್ಲಿ ಅನುಕೂಲವಾಗಲಿದೆ. ಅಲ್ಲದೇ ಕೇವಲ ಕೊರೋನ ಸಂದರ್ಭಗಳಲ್ಲಿ ಮಾತ್ರವಲ್ಲದೇ ಭವಿಷ್ಯದಲ್ಲೂ ತಂತ್ರಜ್ಞಾನ ಬಳಕೆಯಿಂದ ಜನರಿಗೆ ಸಹಾಯವಾಗಲಿದೆ. ಲಾಕ್‍ಡೌನ್ ನಂತರ ರಾಜ್ಯಾದ್ಯಂತ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್‍ಗಳಲ್ಲಿ ವಿಚಾರಣೆ ಸ್ಥಗಿತವಾಗಿದೆ. 

ಈ ಬಗ್ಗೆ ಸಾಫ್ಟ್‍ವೇರ್ ಬಳಸಿಕೊಳ್ಳಲು ಸರಕಾರ ಮುಂದಾಗಬೇಕು. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಗೆ ಕಂದಾಯ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಬೇಕು. ಪ್ರಸ್ತಾವನೆ ಬಗ್ಗೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ. 

ಕೊರೋನ 3ನೇ ಅಲೆ ಆರಂಭವಾಗುವ ಸಾಧ್ಯತೆಯಿದ್ದು, ಸಿದ್ಧತೆಯ ಭಾಗವಾಗಿ ವಿಡಿಯೋ ಕಾನ್ಫರೆನ್ಸ್ ಕಲ್ಪಿಸುವುದು ಅಗತ್ಯವಿದೆ. ಸಿಲಿಕಾನ್ ಸಿಟಿ ಎಂದು ಕರೆಯಲಾಗುವ ಬೆಂಗಳೂರಿನಲ್ಲಿ ಕೋರ್ಟ್‍ಗಳೂ ತಂತ್ರಜ್ಞಾನದ ಲಾಭ ಪಡೆಯಬೇಕು. ಈಗಾಗಲೇ ಹೈಕೋರ್ಟ್‍ನ ಎಲ್ಲ ಪೀಠಗಳಲ್ಲಿ ವಕೀಲರ ವಾದಮಂಡನೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. 
ಅಲ್ಲದೇ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಸೇರಿ ವಿಚಾರಣಾ ನ್ಯಾಯಾಲಯಗಳಲ್ಲೂ ಭಾಗಶಃ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಶ್ವತವಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ಮೂಲಸೌಕರ್ಯ ಕಲ್ಪಿಸುವಂತೆ ಈಗಾಗಲೇ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News