ಕುಶಾಲನಗರ ತಾವರೆಕೆರೆ ಒತ್ತುವರಿ ತೆರವು ಕೋರಿ ಅರ್ಜಿ: ಸಮೀಕ್ಷಾ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2021-07-13 16:48 GMT

ಬೆಂಗಳೂರು, ಜು.13: ಕೊಡಗು ಜಿಲ್ಲೆಯ ಕುಶಾಲನಗರದ ತಾವರೆಕೆರೆ ಒತ್ತುವರಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಕೆರೆ ಪ್ರದೇಶದ ಸಮೀಕ್ಷಾ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂದು ಆರೋಪಿಸಿ ನಗರದ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಜು.9ರಂದು ಕೆರೆ ಪ್ರದೇಶದ ಸರ್ವೇ ನಡೆಸಲಾಗಿದೆ. ಕೆರೆ ಜಾಗವನ್ನು ಒತ್ತುವರಿ ಮಾಡಿ ಕೆಲ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೆರೆ ಪ್ರದೇಶವನ್ನು ಸಮೀಕ್ಷೆ ಮಾಡಿ ವರದಿಯನ್ನು ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿತು. ಜತೆಗೆ ವರದಿ ಲಭ್ಯವಾದ ನಂತರ ಒತ್ತುವರಿ ತೆರವು ಕುರಿತು ನ್ಯಾಯಾಲಯ ಸೂಕ್ತ ಆದೇಶ ಹೊರಡಿಸಲಿದೆ ಎಂದು ತಿಳಿಸಿ ವಿಚಾರಣೆಯನ್ನು ಜು.20ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು: ಕೊಡಗಿನ ಕುಶಾಲನಗರದಿಂದ ನಿಸರ್ಗಧಾಮಕ್ಕೆ ಹೋಗುವ ಮಾರ್ಗದಲ್ಲಿರುವ ತಾವರೆಕೆರೆ ದಾಖಲೆಗಳ ಪ್ರಕಾರ 19 ಎಕರೆ ಇದೆ. ಆದರೆ, ಈ ಕೆರೆ ಮತ್ತು ಸುತ್ತಲಿನ ಜಾಗವನ್ನು ಹಲವು ಪ್ರಭಾವಿಗಳು ಒತ್ತುವರಿ ಮಾಡಿ, ಹೋಂ ಸ್ಟೇ, ಕಾಲೇಜು ಹಾಗೂ ವಿಲ್ಲಾಗಳನ್ನು ನಿರ್ಮಿಸಿದ್ದಾರೆ. ಒತ್ತುವರಿಗಳಿಂದ ಕೆರೆ ಇದೀಗ ಕೇವಲ 1 ಎಕರೆ 30 ಗುಂಟೆಗೆ ಕುಗ್ಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ಕೆರೆ ಒತ್ತುವರಿ ತೆರವುಗೊಳಿಸುವಂತೆ ಹಾಗೂ ಕೆರೆ ಸಂರಕ್ಷಣೆ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News