ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿ: ಸಿ.ಟಿ.ರವಿ ಸಲಹೆ

Update: 2021-07-14 11:56 GMT

ಬೆಂಗಳೂರು, ಜು. 14: `ಉತ್ತರ ಪ್ರದೇಶ, ಅಸ್ಸಾಂ ಮಾದರಿಯಲ್ಲೆ ರಾಜ್ಯದಲ್ಲಿಯೂ `ಜನಸಂಖ್ಯೆ ನಿಯಂತ್ರಣ ಕಾಯ್ದೆ' ಜಾರಿಗೊಳಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗುವುದು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜನಸಂಖ್ಯೆ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಪಕ್ಷದ ಮುಖಂಡರು ಹಾಗೂ ಸಿಎಂ ಅವರ ಜೊತೆ ಚರ್ಚೆ ಮಾಡುತ್ತೇನೆ. ಸಾಧ್ಯವಾದರೆ ವಿಧಾನ ಮಂಡಲ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಮಂಡಿಸುವಂತೆ ಮನವಿ ಮಾಡುವುದು’ ಎಂದು ಇದೇ ವೇಳೆ ಹೇಳಿದರು.

`ಇಂದಿನ ಬದಲಾದ ಕಾಲದಲ್ಲಿ ಕಾಯ್ದೆಯನ್ನು ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ನಾನು ಇದನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದೇನೆ. ಅಂತಿಮವಾಗಿ ಸರಕಾರ ಯಾವುದಾದರೊಂದು ತೀರ್ಮಾನ ಕೈಗೊಳ್ಳಬೇಕು. ಎಲ್ಲರಿಗೂ ಸಮಾನವಾದ ಸವಲತ್ತುಗಳು ಸಿಗಬೇಕೆಂದರೆ ಇಂತಹ ಕಾಯ್ದೆ ಅತ್ಯಗತ್ಯ' ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.

`ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ 30 ಕೋಟಿ ಜನಸಂಖ್ಯೆಯಿತ್ತು. ಇದೀಗ ದೇಶದ ಜನಸಂಖ್ಯೆ 140 ಕೋಟಿ ಇದೆ. ಇಂದು ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ಪ್ರಾಕೃತಿಕ ಸಂಪನ್ಮೂಲ ಹೆಚ್ಚಾಗಲು ಸಾಧ್ಯವಿಲ್ಲ. ಗುಡ್ಡಗಳು ಮಾಯವಾಗಿವೆ, ಅರಣ್ಯ ಮಾಯವಾಗಿವೆ. ಅಂದು 28 ಜನ ಸಾವಿನ ಸರಾಸರಿ ಇತ್ತು. ಇವತ್ತು ಸಾವಿನ ಸರಾಸರಿ ಕೇವಲ 7 ಮಾತ್ರ. ಜನಸಂಖ್ಯೆ ಮಿತಿ ಬಗ್ಗೆ ಚರ್ಚೆ ಹುಟ್ಟುಹಾಕಬೇಕಿದೆ' ಎಂದು ಅವರು ತಿಳಿಸಿದರು.

`ಕಾಂಗ್ರೆಸ್ ಚರ್ಚೆ ಮಾಡದೆ ಆಪರೇಷನ್ ಮಾಡಿದೆ. ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡ್ ಹೆಸರಲ್ಲಿ ನಡೆದಿತ್ತು. ಆದರೆ, ನಾನು ಚರ್ಚೆ ಹುಟ್ಟುಹಾಕಿದ್ದೇನೆ. ಸಾರ್ವಜನಿಕವಾಗಿ ಚರ್ಚೆಯಾಗಲಿ. ಸದನವೇ ಸಾರ್ವಭೌಮವಾದುದು. ಸದನದಲ್ಲೇ ಚರ್ಚೆಯಾಗಲಿ, ಸಾಧಕ-ಬಾಧಕ ಬಗ್ಗೆ ಮಂಥನ ನಡೆಯಲಿ. ಕೆಲವು ಪಕ್ಷಕ್ಕೆ ದೇಶಕ್ಕಿಂತ ರಾಜಕೀಯ ಮುಖ್ಯ. ಆದರೆ ನಮಗೆ ರಾಜಕೀಯ ಮುಖ್ಯವಲ್ಲ, ದೇಶ ಮುಖ್ಯ’ ಎಂದು ರವಿ ತಿಳಿಸಿದರು.

`ನಾನು ಇಷ್ಟು ಹೇಳಿದ್ದಕ್ಕೆ ಕೆಲವರಿಗೆ ಉರಿ ಪ್ರಾರಂಭವಾಗಿದೆ. ಇನ್ನು ದೇಶ ಬಿಟ್ಟು ಕಳಿಸಿ ಎಂದರೆ ಎಷ್ಟಾಗಬೇಡ. ನಾನು ಹೇಳಿದ ತಕ್ಷಣ ಎಲ್ಲವೂ ಆಗಿಬಿಡುತ್ತಾ? ನಾನು ವಿಚಾರವನ್ನ ಸಾರ್ವಜನಿಕವಾಗಿ ಬಿಟ್ಟಿದ್ದೇನೆ. ಪಾರ್ಟಿ ವೇದಿಕೆಯಲ್ಲಿ ಚರ್ಚೆಯಾಗಬೇಕು. ನಂತರ ಸರಕಾರದ ಮಟ್ಟದಲ್ಲಿ, ಸದನದಲ್ಲಿ ಚರ್ಚೆಯಾಗಲಿದೆ. ಆ ನಂತರ ತಾನೇ ಅದು ನಿರ್ಣಯ ಆಗುವುದು’ ಎಂದು ಎಂದು ಹೇಳಿದರು.

`ಜನಸಂಖ್ಯೆ ನಿಯಂತ್ರಣ ಕಾಯ್ದೆ ತರಬೇಕು. ಇದರ ಬಗ್ಗೆ ಸಿಎಂ ಜೊತೆ ಸಮಾಲೋಚನೆ ಮಾಡುತ್ತೇನೆ. ನಮ್ಮ ಅಪ್ಪ-ಅಮ್ಮಗೆ ಐವರು ಮಕ್ಕಳು, ಮಕ್ಕಳಿರಬೇಕು ಮನೆತುಂಬ ಅನ್ನೋದು ಅವತ್ತಿನ ಕಾಲ. ಆದರೆ, ಇವತ್ತಿನ ಕಾಲ ಬದಲಾಗಿದೆ. ಲೀವಿಂಗ್ ಟು ಗೆದರ್ ಇಚ್ಛೆ ಪಡುವವರು ಇದ್ದಾರೆ. ಜಾತಿ ಗಣತಿಯನ್ನ ಹೊರತರಲು ಪ್ರಯತ್ನ ನಡೆದಿದೆ’ ಎಂದು ಸಿ.ಟಿ.ರವಿ ಇದೇ ವೇಳೆ ಹೇಳಿದರು.

`2015 ರಿಂದ 2019ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೂ, ಏಕೆ ಜಾತಿ ಸಮೀಕ್ಷೆ ವರದಿ ಹೊರಗೆ ತರಲಿಲ್ಲ. ಜಾತಿಗಣತಿ ಸರಿಯಿಲ್ಲವೆಂದು ಅವರೇ ತರಲಿಲ್ಲ. ಸಂಪುಟದಲ್ಲೂ ಅದಕ್ಕೆ ಸಹಮತ ಸಿಕ್ಕಿರಲಿಲ್ಲ. ನಾಲ್ಕು ವರ್ಷ ಹಾಗೇ ಇಟ್ಟಿದ್ದರು. ಕಾಂತರಾಜು ಆಯೋಗದ ಅಧ್ಯಕ್ಷರಾಗಿದ್ದರು. ಅವತ್ತೇ ವರದಿಗೆ ಅಂದಿನ ಸರಕಾರ ಅನುಮತಿ ನೀಡಿರಲಿಲ್ಲ. ನಿಜವಾದ ಕಾಳಜಿಯಿದ್ದರೆ ಮಂಡಿಸಬಹುದಿತ್ತು. ಅವರಿಗೆ ನಿಜವಾದ ಕಾಳಜಿಯಿರಲಿಲ್ಲ'

-ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News