ಕೋಲೆಬಸವ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿ: ನಟ ಚೇತನ್‍ರಿಂದ ಸಚಿವ ಭೈರತಿ ಬಸವರಾಜುಗೆ ಪತ್ರ

Update: 2021-07-14 12:06 GMT

ಬೆಂಗಳೂರು, ಜು.14: ಬೆಂಗಳೂರಿನ ಕೆ.ಆರ್.ಪುರದಲ್ಲಿ 15ಕ್ಕೂ ಹೆಚ್ಚು ವರ್ಷದಿಂದ ನೀರು, ವಿದ್ಯುತ್ ಇಲ್ಲದೆ ಟೆಂಟ್‍ಗಳಲ್ಲಿ ವಾಸಿಸುತ್ತಿರುವ ಜನಪದ ಕಲಾವಿದರ 53 ಕೋಲೆಬಸವ ಕುಟುಂಬಗಳಿಗೆ ಮನೆಗಳು ಮತ್ತು ದನಕರುಗಳ ಆಶ್ರಯಕ್ಕೆ ಸೂಕ್ತ ಜಾಗವನ್ನು ತಕ್ಷಣ ಒದಗಿಸಬೇಕೆಂದು ಹೋರಾಟಗಾರ ಹಾಗೂ ನಟ ಚೇತನ್ ಒತ್ತಾಯಿಸಿದ್ದಾರೆ. 

ಈ ಕುರಿತು ಸ್ಥಳೀಯ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜಗೆ ಪತ್ರ ಬರೆದಿರುವ ಅವರು, ಕೆ.ಆರ್.ಪುರದಲ್ಲಿ ವಾಸವಾಗಿರುವ ಕೋಲೆಬಸವ ಎಂಬ ಕಲಾಪ್ರಕಾರದ ಮೂಲಕ ತಮ್ಮ ಕಲಾಸೇವೆಯಲ್ಲಿ ತೊಡಗಿರುವ ಹಲವು ಕಲಾವಿದರ ಕುಟುಂಬಗಳು ವಾಸವಾಗಿದ್ದು, ಮೂಲಭೂತ ಅವಶ್ಯಕತೆಗಳಿಲ್ಲದೆ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಷಾದಿಸಿದ್ದಾರೆ.

ಕೆ.ಆರ್.ಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕಂಗೊಳಿಸುತ್ತಿವೆ. ಆದರೆ, ಇದರ ನಡುವೆ ಕಳೆದ 15-20ವರ್ಷಗಳಿಂದ ವಾಸಿಸುತ್ತಿರುವ ಕೋಲೆಬಸವ ಜನಪದ ಕಲಾವಿದರ ಕುಟುಂಬಗಳು ಕನಿಷ್ಟ ಸೌಲಭ್ಯವಿಲ್ಲದೆ ಜೀವನ ನಡೆಸುತ್ತಿವೆ. ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ಸಚಿವ ಭೈರತಿ ಬಸವರಾಜು ವಿಶೇಷ ಆಸಕ್ತಿ ವಹಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ. 

ನಟ ಚೇತನ್,  ಸಚಿವ ಭೈರತಿ ಬಸವರಾಜುಗೆ ಬರೆದಿರುವ ಪತ್ರಕ್ಕೆ ಹಿರಿಯ ವಿದ್ವಾಂಸ ವಡ್ಡಗೆರೆ ನಾಗರಾಜಯ್ಯ, ಸಾಮಾಜಿಕ ಹೋರಾಟಗಾರರಾದ ಮರಿಸ್ವಾಮಿ, ಕೆ.ವಿ. ಬಾಲಕೃಷ್ಣ, ಬಾಲುಜಂಬೆ, ಕೆ.ಜಿ.ಹಳ್ಳಿ ಸುರೇಶ್ ಸೇರಿದಂತೆ ಹಲವರು ಸಹಿ ಹಾಕುವ ಮೂಲಕ ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News