ಲಸಿಕೆ ಕೊರತೆಯಿಂದ ರಾಜ್ಯದ ಶೇಕಡ 50ರಷ್ಟು ಲಸಿಕೆ ಕೇಂದ್ರಗಳು ಸ್ಥಗಿತ: ಸಿದ್ದರಾಮಯ್ಯ ಆರೋಪ

Update: 2021-07-14 13:08 GMT

ಬೆಂಗಳೂರು :‌ ಲಸಿಕೆ ಕೊರತೆಯಿಂದಾಗಿ ರಾಜ್ಯದ ಶೇಕಡಾ 50ರಷ್ಟು ಲಸಿಕೆ ಕೇಂದ್ರಗಳು ಸ್ಥಗಿತಗೊಂಡಿವೆ  ಕಳೆದ 14 ದಿನಗಳಲ್ಲಿ ಸರಾಸರಿ 2.56 ಲಕ್ಷ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ವರದಿ ಕಳವಳಕಾರಿಯಾದುದು. ಪ್ರಧಾನಿ ನರೇಂದ್ರಮೋದಿಯವರ ಲಸಿಕೋತ್ಸವ ಜಾಹೀರಾತಿಗಷ್ಟೇ ಸೀಮಿತವಾಯಿತೇ? ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಲಸಿಕಾ ಕೇಂದ್ರಕ್ಕೆ ಬರುತ್ತಿರುವ ನೂರು ಮಂದಿಯಲ್ಲಿ20 ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಬೇಡಿಕೆಯ ಶೇಕಡಾ 20ರಷ್ಟು ಲಸಿಕೆಗಳೂ ಪೂರೈಕೆಯಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ವೈದ್ಯರು ಹೇಳುತ್ತಿದ್ದಾರೆ. ಇದರ ವಿರುದ್ದ ಸೊಲ್ಲೆತ್ತಲಾಗದ ಅಸಮರ್ಥ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಸಹಾಯಕರಂತೆ ದೆಹಲಿ ಕಡೆ ಕೈತೋರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಸುವಂತೆ ಹತ್ತಕ್ಕಿಂತ ಹೆಚ್ಚು ಪತ್ರಗಳನ್ನು ರಾಜ್ಯ ಸರ್ಕಾರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಯಾವದೇ ಸ್ಪಂದನೆ ಇಲ್ಲ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳುತ್ತಾ ಬಂದಿರುವ ಕೇಂದ್ರ ಸರ್ಕಾರ ತನ್ನ ವೈಫಲ್ಯತೆಯನ್ನು ಒಪ್ಪಲಿದೆಯೇ?

ರಾಜ್ಯದಲ್ಲಿರುವ 8500 ಲಸಿಕಾ ಕೇಂದ್ರಗಳಲ್ಲಿ ಬಹುಪಾಲು ಕೇಂದ್ರಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಲ್ಲಿ ಲಭ್ಯ ಇರುವ ಲಸಿಕೆಗಳನ್ನು ಕೂಡಾ ರಾಜಕಾರಣಿಗಳು ಮತ್ತು ಪ್ರಭಾವಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತಿರುವ ದೂರುಗಳಿವೆ. ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳ ಮುಂಭಾಗದಲ್ಲಿ ಲಸಿಕಾ ಆಕಾಂಕ್ಷಿಗಳು ಬೆಳಿಗ್ಗೆಯಿಂದ ಸಾಲಲ್ಲಿ ನಿಂತು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ.

ಈಗಿನ ಅಂದಾಜಿನಂತೆ ರಾಜ್ಯದಲ್ಲಿ 4.97 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಎರಡು ಡೋಸ್ ಗಳಂತೆ ಒಟ್ಟು 9.6 ಕೋಟಿ ಲಸಿಕೆಗಳು ಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ಇಲ್ಲಿಯ ವರೆಗೆ ಪೂರೈಸಿರುವುದು 2.6 ಕೋಟಿ ಲಸಿಕೆ ಮಾತ್ರ ಎಂದು ಆರೋಗ್ಯ ಇಲಾಖೆ ಹೇಳುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.

ಒಂದೆಡೆ ಯುವಜನರನ್ನು ಗುರಿಯಾಗಿಟ್ಟುಕೊಂಡಿದೆಯೆನ್ನಲಾದ ಕೊರೊನಾ ಮೂರನೇ ಅಲೆಯ ಭೀತಿ, ಇನ್ನೊಂದೆಡೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತು ಕಾಲೇಜುಗಳನ್ನು ತೆರೆಯಲು ಸರ್ಕಾರದ ಪ್ರಯತ್ನ. ಈ ಪರಿಸ್ಥಿತಿಯಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಪೂರ್ವ ಸಿದ್ದತೆ ನಡೆಸಬೇಕಾಗಿದ್ದ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ.

ಜುಲೈ ಅಂತ್ಯದೊಳಗೆ ದೇಶಾದ್ಯಂತ 51.6 ಕೋಟಿ ಕೊರೊನಾ ಲಸಿಕೆಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಈ ಗುರಿ ಸಾಧನೆಗಾಗಿ ಪ್ರತಿದಿನ 70 ಲಕ್ಷ ಲಸಿಕೆ ನೀಡಬೇಕಾಗಿದ್ದರೂ ಈಗ 40 ಲಕ್ಷ ಲಸಿಕೆ ಮಾತ್ರ ನೀಡಲಾಗುತ್ತಿದೆ.  ಇಲ್ಲಿಯ ವರೆಗೆ 38.5 ಕೋಟಿ ಲಸಿಕೆಗಳನ್ನಷ್ಟೇ ನೀಡಲಾಗಿದೆ. ದಿನದಿಂದ ದಿನಕ್ಕೆ ಲಸಿಕೆ ನೀಡಿಕೆಯ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾದರೆ ಮುಂದೇನು?

ರಾಜ್ಯಗಳು ಲಸಿಕೆ ಹಾಕುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಈ ಹೊಣೆಯನ್ನು ತನ್ನ ತಲೆ ಮೇಲೆ ಹೊತ್ತುಕೊಂಡ ಪ್ರಧಾನಿಯವರ ಆಶ್ವಾಸನೆ, ಅವರ ಎಂದಿನ ಸುಳ್ಳಿನ ಸರಮಾಲೆಗೆ ಇನ್ನೊಂದು ಸುಳ್ಳಿನ ಸೇರ್ಪಡೆ ಅಷ್ಟೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News