×
Ad

ಲಾಕ್‍ಡೌನ್ ಸಂಕಷ್ಟ: ಸಾಲ ತೀರಿಸಲಾಗದೆ ಕಿಡ್ನಿ ಮಾರಾಟಕ್ಕೆ ಮುಂದಾದ ಚಿಕ್ಕಮಗಳೂರಿನ ವಾಹನ ಚಾಲಕ

Update: 2021-07-14 20:59 IST

ಚಿಕ್ಕಮಗಳೂರು, ಜು.14: ಕೋವಿಡ್ ಮಹಾಮಾರಿ ಸಾಮಾನ್ಯ ಜನರ ಬದುಕನ್ನು ಎಂತಹ ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದೆ ಎಂಬುದಕ್ಕೆ ಕಾಫಿನಾಡಿನ ವಾಹನ ಚಾಲಕರೊಬ್ಬರ ಸ್ಥಿತಿ ಸಾಕ್ಷಿ ಹೇಳುತ್ತಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಈ ವ್ಯಕ್ತಿ ತಾನು ಮಾಡಿರುವ ವಾಹನದ ಸಾಲ ತೀರಿಸಲಾಗದೆ ಫೈನಾನ್ಸ್ ನವರ ಕಿರುಕುಳಕ್ಕೆ ಬೇಸತ್ತು ತನ್ನ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದು, ಕಿಡ್ನಿ ಬೇಕಿದ್ದವರು ಸಂಪರ್ಕಿಸಿ ಎಂದು ತನ್ನ ಮೊಬೈಲ್ ನಂಬರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಮೂಡಿಗೆರೆ ತಾಲೂಕಿನ ಗಬ್ಗಲ್ ನಿವಾಸಿಯಾಗಿರುವ ಹಕೀಮ್ ಎಂಬವರು ತನ್ನ ಸಾಲ ತೀರಿಸಲು ಕಿಡ್ನಿ ಮಾರಾಟ ಮಾಡಲು ಮುಂದಾಗಿರುವ ವ್ಯಕ್ತಿಯಾಗಿದ್ದು, ಫೇಸ್‍ಬುಕ್, ವಾಟ್ಸ್ಯಾಪ್ ಗಳಲ್ಲಿ ತನ್ನ ಕಿಡ್ನಿ ಮಾರಾಟಕ್ಕಿದೆ. ಕಿಡ್ನಿ ಪಡೆದು ಸಾಲ ಮರುಪಾವತಿ ಮಾಡಲು ಸಹಾಯ ಮಾಡಿ ಎಂದು ಎಂದು ಪೋಸ್ಟ್ ಹಾಕುವ ಮೂಲಕ ಸಾರ್ವಜನಿಕರ ನೆರವಿಗಾಗಿ ಅಂಗಲಾಚಿದ್ದಾರೆ. 

ಹಕೀಮ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ನಲ್ಲಿ, ತಾನು ಪ್ಯಾಸೆಂಜರ್ಸ್ ವಾಹನದ ಚಾಲಕನಾಗಿದ್ದು, ಫೈನಾನ್ಸ್ ಒಂದರಲ್ಲಿ ಸಾಲ ಮಾಡಿ ವಾಹನ ಖರೀದಿಸಿದ್ದೇನೆ. ಲಾಕ್‍ ಡೌನ್‍ನಿಂದಾಗಿ ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದ ವೇಳೆ ವಾಹನದ ಇಂಜಿನ್ ಹಾಳಾಗಿದ್ದು, ರಿಪೇರಿ ಮಾಡಿಸಲೂ ಹಣವಿಲ್ಲ. ವಾಹನಕ್ಕೆ ಸಾಲ ನೀಡಿದ ಫೈನಾನ್ಸ್ ನವರು ಸಾಲ ಮರುಪಾವತಿಸುವಂತೆ ಚಿತ್ರಹಿಂಸೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜೀವನಕ್ಕಾಗಿ ಇತರರಿಂದ ಪಡೆದ ಸಾಲವನ್ನೂ ತೀರಿಸಲು ಸಾಧ್ಯವಾಗುತ್ತಿಲ್ಲ. ಕೂಲಿ ಕೆಲಸಕ್ಕೆ ಹೋಗೋಣವೆಂದರೆ ಸೊಂಟದ ನೋವಿನ ಸಮಸ್ಯೆಯಿಂದ ಅದನ್ನೂ ಮಾಡಲಾಗುತ್ತಿಲ್ಲ. 5 ತಿಂಗಳಿಂದ ಮನೆಯ ಬಾಡಿಗೆಯನ್ನೂ ಕಟ್ಟಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಸಾಲ ಕೊಟ್ಟವರಿಗೆ ಹಣ ಹಿಂದಿರುಗಿಸುವುದು ನನ್ನ ಧರ್ಮ. ಆದರೆ ಕೆಲಸವಿಲ್ಲದೆ ವಾಹನ ಕೆಟ್ಟು ನಿಂತಿರುವುದರಿಂದ ಆದಾಯ ಇಲ್ಲದೇ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಸಾಲವನ್ನು ತೀರಿಸಲೇಬೇಕೆಂಬ ಉದ್ದೇಶದಿಂದ ನನ್ನ ಕಿಡ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದೇನೆ. ಕಿಡ್ನಿಯ ಆವಶ್ಯಕತೆ ಇರುವವರು ತನ್ನ ಮೊಬೈಲ್ ನಂಬರ್ ಸಂಪರ್ಕಿಸಿ ಎಂದು ಬರೆದುಕೊಂಡಿರುವ ಹಕೀಮ್, ಸಾಲಗಾರರ ಕಾಟದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಸಾಯುವ ಮುನ್ನ ಸಾಲ ತೀರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಕಿಡ್ನಿ ಪಡೆದು ತನಗೆ ನೆರವಾಗಿ ಎಂದು ಅವರು ತಮ್ಮ ಪೋಸ್ಟ್ ಮೂಲಕ ಅಂಗಲಾಚಿದ್ದಾರೆ. 

ಈ ಪೋಸ್ಟ್ ಕುರಿತು ಹಕೀಮ್ ಅವರನ್ನು ವಾರ್ತಾಭಾರತಿ ಸಂಪರ್ಕಿಸಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಅವರು, ತಾನು ಕೆಲಸವಿಲ್ಲದೆ ಸಾಲದ ಸಮಸ್ಯೆಯಲ್ಲಿದ್ದೇನೆ. ಈ ಕಾರಣಕ್ಕೆ ತಾನು ಕಿಡ್ನಿ ಮಾರಲು ಮುಂದಾಗಿದ್ದೇನೆ. ಈ ಪೋಸ್ಟ್ ಅನ್ನು ನಾನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಲಗಾರರ ಕಾಟದಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ಪೋಸ್ಟ್ ನಕಲಿ ಅಲ್ಲ ಎಂದಿದ್ದಾರೆ. 

ಇತ್ತೀಚೆಗೆ ಅಸ್ಸಾಂ ರಾಜ್ಯದ ಮೊರಿಗಾಂವ್ ಜಿಲ್ಲೆಯ ಗ್ರಾಮೀಣ ಜನರು ಬಡತನದಿಂದ ಕಂಗೆಟ್ಟು ತಮ್ಮ ಕಿಡ್ನಿಗಳನ್ನು ದಂಧೆಕೋರರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News