ಶಾಲೆಗೆ ದಾಖಲಾಗದ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲು ಅಧಿಕಾರಿಗಳಿಂದ ಒತ್ತಡ: ಲೋಕೇಶ್ ತಾಳಿಕಟ್ಟೆ ಆರೋಪ

Update: 2021-07-14 16:47 GMT

ಬೆಂಗಳೂರು, ಜು.14: ಶಾಲೆಗೆ ದಾಖಲಾಗದ ವಿದ್ಯಾರ್ಥಿಗಳನ್ನು ನಕಲಿ ದಾಖಲಿ ಸೃಷ್ಟಿಸಿ ತೇರ್ಗಡೆಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆಂದು ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಹಲವು ಮಕ್ಕಳು ದಾಖಲಾಗದಿದ್ದರೂ ನಕಲಿ ದಾಖಲೆ ಸೃಷ್ಟಿಸುವಂತೆ ಅಧಿಕಾರಿಗಳಿಂದ ಒತ್ತಡ ಬರುತ್ತಿದೆ. ಇದರಿಂದ ವಿದ್ಯಾರ್ಥಿಗೆ, ಪೋಷಕರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಸೇರಿದಂತೆ ಹಲವು ಪ್ರದೇಶದ ಮಕ್ಕಳು ತಮ್ಮ ಪೋಷಕರೊಟ್ಟಿಗೆ ಗುಳೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನೇ ನೋಡದೆ ನಾವು ಅಧಿಕಾರಿಗಳ ಒತ್ತಡದಿಂದಾಗಿ ನಕಲಿ ದಾಖಲೆ ಸೃಷ್ಟಿಸಿ ದಾಖಲಾತಿ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಬಗ್ಗೆ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಹಲವು ಶಾಲೆಗಳಲ್ಲಿ ವಾಸ್ತವದಲ್ಲಿ ಇರುವ ಮಕ್ಕಳಿಗಿಂತ ಹೆಚ್ಚಿನ ಮಕ್ಕಳ ದಾಖಲಾತಿ ಇದೆ. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣದ ಅಂಕಿ ಅಂಶಗಳನ್ನು ನ್ಯಾಯಾಲಯ ಸೇರಿದಂತೆ ಮತ್ತಿತರ ಕಡೆಗಳಿಗೆ ಸಲ್ಲಿಸಬೇಕಾಗಿರುವುದರಿಂದ ಶಾಲೆಗಳಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಒಂದು ವೇಳೆ ಮಕ್ಕಳ ತಮ್ಮ ಊರಿನ ಶಾಲೆಯಲ್ಲೂ ದಾಖಲಾತಿ, ಗುಳೆ ಹೋದ ಪ್ರದೇಶದಲ್ಲಿರುವ ಶಾಲೆಯಲ್ಲಿ ದಾಖಲಾದರೆ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಈಡಾಗಬೇಕಾಗುತ್ತದೆ. ಹಾಗೂ ಬಾಲ್ಯವಿವಾಹ, ಜೀತ ಪದ್ಧತಿಗೆ ಸಿಲುಕಿರುವ ಮಕ್ಕಳನ್ನು ನಕಲಿ ದಾಖಲೆ ಸೃಷ್ಟಿಸಿ ಶಾಲೆಗಳಲ್ಲಿ ದಾಖಲು ಮಾಡಿದರೆ ನೈಜ ಅಂಕಿಅಂಶಗಳನ್ನು ನಾವೇ ಮರೆ ಮಾಚಿದಂತಾಗುತ್ತದೆ. ಇಂತಹ ಗಂಭೀರ ಸಮಸ್ಯೆಗಳ ಕುರಿತು ಸರಕಾರಕ್ಕೆ ಗಮನಕ್ಕೆ ತಂದಿದ್ದೇವೆ. ಆದರೆ, ಅವರಿಂದ ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News