ಮೋದಿ ಮುಖದ ಬ್ಯಾನರ್ ಹಾಕಿದರೆ ವೈಫಲ್ಯ ಮುಚ್ಚಿಕೊಳ್ಳಲು ಆಗದು: ಕಾಂಗ್ರೆಸ್ ಟೀಕೆ

Update: 2021-07-14 16:57 GMT

ಬೆಂಗಳೂರು, ಜು. 14: `ದೇಶಾದ್ಯಂತ ಲಸಿಕೆಗಳಿಗೆ ಹಾಹಾಕಾರ, ನೂಕುನುಗ್ಗಲು. ಲಸಿಕಾ ಕೇಂದ್ರಗಳಿಗೆ ಕೇವಲ 100, 200 ಲಸಿಕೆಗಳ ಪೂರೈಕೆ, ಶೇ.50ರಷ್ಟು ಲಸಿಕಾ ಕೇಂದ್ರಗಳು ಬಾಗಿಲು ಮುಚ್ಚಿವೆ, ಎಲ್ಲಿ ನೋಡಿದರೂ ನೋ ವ್ಯಾಕ್ಸಿನ್ ಬೋರ್ಡ್. ಪತ್ರಿಕೆಗಳಲ್ಲಿ ಪೂರ್ಣ ಪುಟ ಜಾಹೀರಾತು, ಹಳ್ಳಿಹಳ್ಳಿಗಳಲ್ಲಿ ಮೋದಿ ಮುಖದ ಬ್ಯಾನರ್ ಹಾಕಿದಾಕ್ಷಣ ವೈಫಲ್ಯ ಮುಚ್ಚದು' ಎಂದು ಕಾಂಗ್ರೆಸ್ ಟೀಕಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `1ನೆ ಡೋಸ್ ಪಡೆದವರಿಗೆ 2ನೆ ಡೋಸ್ ಇಲ್ಲ, ವಿದ್ಯಾರ್ಥಿಗಳಿಗೆ ಲಸಿಕೆ ಸಿಗುತ್ತಿಲ್ಲ, ಲಸಿಕೆ ಪಡೆಯದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಲವರಿದ್ದಾರೆ. ಇನ್ನೂ ಹಲವು 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಕ್ಕಿಲ್ಲ. ಕೆಲಸಕ್ಕೆ ತೆರಳುವ ನೌಕರರಿಗೆ ಲಸಿಕೆ ಇಲ್ಲ. ಹೀಗಿದ್ದರೂ ಪ್ರಚಾರದಲ್ಲಿರುವ ಆಸಕ್ತಿ ಲಸಿಕೆ ನೀಡುವಿಕೆಯಲ್ಲಿ ಇಲ್ಲ ಈ ಸರಕಾರಕ್ಕೆ!' ಎಂದು ಹೇಳಿದೆ.

`ಲಸಿಕೆಯನ್ನು ರಫ್ತು ಮಾಡಿ ಭಾರತೀಯರಿಗೆ ಮೋಸ ಮಾಡಿತು ಕೇಂದ್ರ ಸರಕಾರ. ನಂತರ ಲಸಿಕೆಯನ್ನ ರಾಜ್ಯ ಸರಕಾರಗಳಿಗೆ ವ್ಯಾಪಾರಕ್ಕಿಟ್ಟಿತು, ತದನಂತರ ಲಸಿಕೆ ಜವಾಬ್ದಾರಿಯನ್ನ ರಾಜ್ಯಗಳ ತಲೆಗೆ ಹೊರಿಸಿತು, ಸುಪ್ರೀಂ ಕೋರ್ಟ್ ತಪರಾಕಿಯ ನಂತರ ಮತ್ತೆ ಉಚಿತವೆಂದು ಪ್ರಚಾರಕ್ಕೆ ಬಳಸಿಕೊಂಡಿತು ಇದು ನರೇಂದ್ರ ಮೋದಿ ಅವರ ವಿಫಲ ಲಸಿಕಾ ನೀತಿಗೆ ಸಾಕ್ಷಿ' ಎಂದು ಟ್ವೀಟ್ ನಲ್ಲಿ ದೂರಿದೆ.

`ಲಸಿಕೆ ನೀಡುವ ಜವಾಬ್ದಾರಿಯನ್ನ ಕೇಂದ್ರ ಸರಕಾರ ವಹಿಸಿಕೊಂಡ ನಂತರ ಶೇ.60ರಷ್ಟು ಕುಸಿತದಿಂದ ಲಸಿಕಾಕರಣ ಇನ್ನಷ್ಟು ಹಳ್ಳ ಹಿಡಿದಿದೆ. ತಾರತಮ್ಯ ಮುಚ್ಚಿಡಲು ರಾಜ್ಯವಾರು ಲಸಿಕೆ ಹಂಚಿಕೆಯ ಅಂಕಿ ಅಂಶವನ್ನು ಮುಚ್ಚಿಟ್ಟಿದೆ. ರಾಜ್ಯದಲ್ಲಿ ಲಸಿಕೆಗಳಿಗೆ ತೀವ್ರ ಕೊರತೆ ಇದ್ದರೂ ರಾಜ್ಯ ಬಿಜೆಪಿ ಬಾಯಿಗೆ ಬೀಗ ಹಾಕಿಕೊಂಡಿದೆ' ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News