×
Ad

ಸರಕಾರದ ಕಾನೂನುಗಳನ್ನು ವಿರೋಧಿಸುವವರು ರಾಜ್ಯದಲ್ಲಿರಲು ಅರ್ಹರಲ್ಲ: ಟಿ.ಎಸ್.ನಾಗಾಭರಣ

Update: 2021-07-14 23:21 IST

ಬೆಂಗಳೂರು, ಜು.14: ಕರ್ನಾಟಕದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಲು ಇಚ್ಛಿಸುವುದಿಲ್ಲವೋ ಅವರು ಕರ್ನಾಟಕದಲ್ಲಿರಲು ಅರ್ಹರಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಕನ್ನಡ ಭಾಷಾ ಕಲಿಕಾ ಅಧಿನಿಯಮದ ವಿರುದ್ಧ ಸಹಿ ಸಂಗ್ರಸುತ್ತಿರುವ ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೆÇೀಷಕರು ರಾಜ್ಯ ಸರಕಾರ ಜಾರಿಗೆ ತಂದಿರುವ ಕನ್ನಡ ಭಾಷಾಕಲಿಕಾ ಅಧಿನಿಯಮದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿರುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವನ್ನು ಭೇಟಿ ಮಾಡಿ ಅವರು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರಸ್ತುತ ಕಾಯಿದೆಯಲ್ಲಿ ಮಕ್ಕಳ ಮೇಲೆ ಭಾಷೆ ಕಲಿಕೆಯನ್ನು ಹೇರುತ್ತಿಲ್ಲ. ಬದಲಿಗೆ ಸಂವಿಧಾನಬದ್ಧವಾಗಿ ಹಂತ ಹಂತವಾಗಿ ಮಕ್ಕಳಿಗೆ ಭಾಷೆಯ ಕಲಿಕೆಯಲ್ಲಿ ತೊಡಗಿಸಲಾಗುತ್ತಿದೆ. ರಾಜ್ಯ ಸರಕಾರ ಕನ್ನಡ ಭಾಷಾ ಕಲಿಕಾ ಅಧಿನಿಯಮ-2017ರನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಕೇಂದ್ರ ಪಠ್ಯ ಕ್ರಮದ ಸಿ.ಬಿ.ಎಸ್.ಇ, ಐ.ಸಿ.ಎಸ್.ಇ. ಸೇರಿದಂತೆ ಇತರೆ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ಕೆಲವು ಹೊರ ರಾಜ್ಯದ ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಆನ್‍ಲೈನ್ ಪಿಟೀಷನ್ ಮೂಲಕ ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವುದು ದುರಾದೃಷ್ಟಕರ ಎಂದು ನಾಗಾಭರಣ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದಾಗಿ ರಾಜ್ಯದಲ್ಲಿ ನೆಲೆಸಿರುವ ಜನರು ಅರ್ಥೈಸಿಕೊಳ್ಳಬೇಕು. ಯಾವುದನ್ನು ತಪ್ಪಾಗಿ ಗ್ರಹಿಸಿ ಭಾಷಾ ಸೌಹಾರ್ದತೆಗೆ ತೊಡಕುಂಟಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಕನ್ನಡ ಕಲಿಕಾ ಅಧಿನಿಯಮವನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಜಾರಿಗೊಳಿಸುವಂತೆ ಸುರೇಶ್ ಕುಮಾರ್ ಅವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News