ಕೊರೋನ ವಿರುದ್ಧ ಹೋರಾಟ: ದ್ವಂದ್ವ ನೀತಿ ಬೇಡ

Update: 2021-07-15 06:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೂರನೆಯ ಅಲೆಯ ಕುರಿತಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಲು ಈಗಾಗಲೇ ವೈದ್ಯರು ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಅವರೂ ಈ ಬಗ್ಗೆ ಜನರನ್ನು ಎಚ್ಚರಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಂತೂ ಅಂತರ ಮರೆತ ಜನರ ಕುರಿತಂತೆ ವಿಶೇಷ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ‘ಗಿರಿಧಾಮಗಳಿಗೆ, ಮಾರುಕಟ್ಟೆ ಪ್ರದೇಶಗಳಿಗೆ ಜನರು ಅಂತರವಿಲ್ಲದೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಆತಂಕಕಾರಿ’ ಎಂದು ಮುಖ್ಯಮಂತ್ರಿಗಳ ಜೊತೆಗಿನ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ. ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದ ಮೂಲ ಸೌಕರ್ಯಗಳ ಸುಧಾರಣೆಗಾಗಿ ಈಗಾಗಲೇ 23,000 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಲಾಗಿದೆ. ರಾಜ್ಯದ ಸಚಿವರೊಬ್ಬರು ‘ಎಚ್ಚರ ತಪ್ಪಿದರೆ ಮತ್ತೆ ಲಾಕ್‌ಡೌನ್’ ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ. ಎರಡನೆ ಅಲೆಯಿಂದ ಪಾಠ ಕಲಿತು, ಸರಕಾರ ಮೂರನೇ ಅಲೆಯನ್ನು ಎದುರಿಸಲು ಸಣ್ಣ ಪ್ರಮಾಣದಲ್ಲಾದರೂ ಸಿದ್ಧತೆ ನಡೆಸುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಮಾತುಗಳನ್ನು ಜನರು ಗಂಭೀರವಾಗಿ ಸ್ವೀಕರಿಸಬೇಕಾಗಿದೆ.

ಕನಿಷ್ಠ ಮಾಸ್ಕ್, ಸುರಕ್ಷಿತ ಅಂತರ ಇವುಗಳ ಬಗ್ಗೆ ಒಂದಿಷ್ಟು ಗಮನ ನೀಡಿದರೂ ಅದು ದೊಡ್ಡ ಮಟ್ಟದಲ್ಲಿ ವೈರಸ್ ಹರಡದಿರಲು ಸಹಾಯ ಮಾಡಬಹುದು. ದೇಶಾದ್ಯಂತ ಕೋಟ್ಯಂತರ ಜನರು ಅನ್ನಾಹಾರಕ್ಕಾಗಿ ಚಡಪಡಿಸುತ್ತಿರುವ ಈ ದಿನಗಳಲ್ಲಿ ಅನಗತ್ಯ ಬಟ್ಟೆಬರೆ, ಮೋಜು, ಪ್ರವಾಸಗಳಿಂದ ದೂರವಿರುವುದು ಕೊರೋನ ಎದುರಿಸಲು ನೀಡಬಹುದಾದ ಬಹುದೊಡ್ಡ ಕೊಡುಗೆಯಾಗಿದೆ. ಇದೇ ಸಂದರ್ಭದಲ್ಲಿ, ಮೂರನೆಯ ಅಲೆಯನ್ನು ಎದುರಿಸುವ ಹೊಣೆಯನ್ನು ಸರಕಾರ ಸಂಪೂರ್ಣ ಜನರ ತಲೆಯ ಮೇಲೆ ಹಾಕಿ ಬಿಡುವುದು ಸರಿಯಲ್ಲ. ಎರಡನೇ ಅಲೆ ದೇಶಾದ್ಯಂತ ಭುಗಿಲೆದ್ದದ್ದು ಜನರ ಬೇಜವಾಬ್ದಾರಿಯಿಂದ ಅಲ್ಲ ಎನ್ನುವುದು ಜಗತ್ತಿಗೇ ಗೊತ್ತಿದೆ. ರಾಜಕಾರಣಿಗಳ ಬೇಜವಾಬ್ದಾರಿಯಿಂದಾಗಿ ಎರಡನೇ ಅಲೆ ಸ್ಫೋಟಗೊಂಡಿತು. ಜನರಿಗೆ ಮಾದರಿಯಾಗ ಬೇಕಾಗಿದ್ದ ನಾಯಕರೇ ಬೀದಿಗಿಳಿದು ಚುನಾವಣಾ ಪ್ರಚಾರ ನಡೆಸಿದರು. ಸಹಸ್ರಾರು ಜನರನ್ನು ಸೇರಿಸಿ ರ್ಯಾಲಿ ನಡೆಸಿದರು. ಧಾರ್ಮಿಕ ಜಾತ್ರೆಗಳಿಗೆ ಅವಕಾಶ ನೀಡಿದರು.

ವೈದ್ಯಕೀಯ ತಜ್ಞರ ಎಲ್ಲಾ ಎಚ್ಚರಿಕೆಗಳನ್ನು ಬದಿಗೆ ತಳ್ಳಿ ‘ಭಾರತ ಕೊರೋನವನ್ನು ಎದುರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ’ ಎಂದು ಕೇಂದ್ರ ಸಚಿವರೊಬ್ಬರು ಸಾರ್ವಜನಿಕವಾಗಿ ಘೋಷಿಸಿದರು. ಕುಂಭಮೇಳಕ್ಕೆ ಸಹಸ್ರಾರು ಜನರನ್ನು ಸೇರಿಸಲು ಸರಕಾರವೇ ಅನುಮತಿ ನೀಡುವಾಗ, ‘ಗಂಗಾ ಮಾತೆ ನಮ್ಮನ್ನು ಕೊರೋನದಿಂದ ರಕ್ಷಿಸುತ್ತಾಳೆ’ ಎಂದು ಒಂದು ರಾಜ್ಯದ ಮುಖ್ಯಮಂತ್ರಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ, ಚುನಾವಣಾ ರ್ಯಾಲಿಗೆ ಸೇರಿದ ಜನರನ್ನು ಪ್ರಧಾನಮಂತ್ರಿಯೇ ವೇದಿಕೆಯಲ್ಲಿ ನಿಂತು ಅಭಿನಂದಿಸುವಾಗ, ಜನಸಾಮಾನ್ಯರು ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ಮಾರುಕಟ್ಟೆಗೆ ಹೋಗುವುದನ್ನು ನಿರಾಕರಿಸುವುದು ಹೇಗೆ? ಒಂದನ್ನು ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕು.

ನೋಟು ನಿಷೇಧದಿಂದ ಕಂಗೆಟ್ಟ ಅಳಿದುಳಿದ ಆರ್ಥಿಕತೆಯನ್ನು ಲಾಕ್‌ಡೌನ್ ಸಂಪೂರ್ಣ ನಾಶ ಮಾಡಿದೆ. ಜನಸಾಮಾನ್ಯರು ಬೇಜವಾಬ್ದಾರಿಯಿಂದ ಮಾರುಕಟ್ಟೆಯಲ್ಲಿ ನೆರೆಯುತ್ತಿಲ್ಲ. ದಿನದ ಕೂಳು ಅರಸಿ ಅವರು ಮಾರುಕಟ್ಟೆ ಇತ್ಯಾದಿಗಳಿಗೆ ತೆರಳುತ್ತಿದ್ದಾರೆ. ಅಂದಂದೇ ದುಡಿದು ಬದುಕುವವರಿಗೆ ರಸ್ತೆಗಿಳಿಯುವುದು ಅನಿವಾರ್ಯ. ಆದರೆ ರಾಜಕಾರಣಿಗಳಿಗೆ ಅಂತಹ ಯಾವುದೇ ಅನಿವಾರ್ಯತೆ ಇದ್ದಿರಲಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಸೇರಿಸಿದರು. ಚುನಾವಣೆ ಮುಗಿದ ಬೆನ್ನಿಗೇ ಜನರ ಮೇಲೆ ಲಾಕ್‌ಡೌನ್ ಹೇರಿದರು. ಇದೀಗ ಅದೇ ರಾಜಕಾರಣಿಗಳು ಮತ್ತೆ ಜನರಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ‘ಎಚ್ಚರ ತಪ್ಪಿದರೆ ಮತ್ತೊಮ್ಮೆ ಲಾಕ್‌ಡೌನ್’ ಎಂದು ಹೇಳುವ ಮೂಲಕ, ಎರಡನೇ ಅಲೆಯ ಆರೋಪವನ್ನು ಜನರ ಮೇಲೆ ಹೊರಿಸುತ್ತಿದ್ದಾರೆ.

ಮಾರುಕಟ್ಟೆ, ಗಿರಿಧಾಮಗಳಲ್ಲಿ ಸುರಕ್ಷಿತ ಅಂತರವನ್ನು ಜನರು ಮರೆಯುತ್ತಿದ್ದಾರೆ ಎಂಬ ಪ್ರಧಾನಿಯ ಆತಂಕವನ್ನೇ ತೆಗೆದುಕೊಳ್ಳೋಣ. ಈ ಆತಂಕವನ್ನು ವ್ಯಕ್ತಪಡಿಸುವ ಸಂದರ್ಭದಲ್ಲೇ ಉತ್ತರ ಪ್ರದೇಶ ಸರಕಾರ ಕನ್ವರ್ ಯಾತ್ರೆಗೆ ಅನುಮತಿಯನ್ನು ನೀಡಿದೆ. ಈ ಬಗ್ಗೆ ಇದೀಗ ನ್ಯಾಯಾಲಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಒಂದೆಡೆ ದುಡಿಮೆಗಾಗಿ ರಸ್ತೆಗಿಳಿದ ಜನರನ್ನು ತಡೆಯುವ ಸರಕಾರ, ಮಗದೊಂದೆಡೆ ಇಂತಹ ಧಾರ್ಮಿಕ ಜಾತ್ರೆ, ಯಾತ್ರೆಗಳಿಗೆ ಅನುಮತಿ ನೀಡುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಧಾರ್ಮಿಕ ಜಾತ್ರೆಗಳಿಗೆ ಜನ ಸೇರಬಹುದಾದರೆ, ದೈನಂದಿನ ಅವಶ್ಯಕತೆಗಾಗಿ ಜನರು ಯಾಕೆ ಮಾರುಕಟ್ಟೆಯಲ್ಲಿ ಸೇರಬಾರದು? ಹಾಗಾದರೆ ಎರಡನೆಯ ಅಲೆಯಿಂದಾದ ನಾಶ, ನಷ್ಟವೂ ರಾಜಕಾರಣಿಗಳಿಗೆ ಪಾಠ ಕಲಿಸಿಲ್ಲ ಎಂದಾಯಿತಲ್ಲವೇ? ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂತಹ ಧಾರ್ಮಿಕ ಜಾತ್ರೆ, ಸಮಾವೇಶಗಳಿಗೆ ಸರಕಾರ ಅನುಮತಿ ನೀಡುತ್ತಿದೆೆ.

ಬಿಜೆಪಿ ಅಧಿಕಾರಕ್ಕೆ ಬರಲು ಇಂತಹ ಜಾತ್ರೆಗಳು ಬಹಳಷ್ಟು ಸಹಾಯ ಮಾಡುತ್ತದೆ. ‘ಹಿಂದುತ್ವ’ ಜಾಗೃತಿಯ ಹೆಸರಿನಲ್ಲಿ ಈ ಜಾತ್ರೆಗಳನ್ನು ರಾಜಕಾರಣಿಗಳು ಗರಿಷ್ಠ ಮಟ್ಟದಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಆದುದರಿಂದಲೇ ಅವರಿಗೆ ಈ ಯಾತ್ರೆ, ಜಾತ್ರೆಗಳನ್ನು ನಿಯಂತ್ರಿಸುವುದು ಬೇಡವಾಗಿದೆ. ಮೊತ್ತ ಮೊದಲು ಪ್ರಧಾನಿ ನರೇಂದ್ರ ಮೋದಿಯವರು, ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಜವಾಬ್ದಾರಿಯನ್ನು ಕಲಿಸಬೇಕಾಗಿದೆ. ಜೊತೆಗೆ ತಾವೂ ಅದನ್ನು ಪಾಲಿಸಬೇಕಾಗಿದೆ.

23,000 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದಾಕ್ಷಣ ಕೊರೋನ ವೈರಸ್ ಹೆದರಿ ಓಡಿ ಹೋಗುವುದಿಲ್ಲ. ಆ ಪ್ಯಾಕೇಜ್ ಸದುಪಯೋಗವಾಗುವಂತೆ ನೋಡಿಕೊಳ್ಳುವ ಅಗತ್ಯವಿದೆ. ಕೊರೋನದ ಹೆಸರಿನಲ್ಲಿ ರಾಜಕಾರಣಿಗಳು, ವೈದ್ಯರು ಭಾರೀ ಪ್ರಮಾಣದಲ್ಲಿ ಸರಕಾರದ ಹಣವನ್ನು ದುರುಪಯೋಗಪಡಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಅರ್ಹರಿಗೆ ಪರಿಹಾರ ತಲುಪದೇ, ಅನರ್ಹರು ಅವುಗಳನ್ನು ಕಬಳಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಆದುದರಿಂದ ಪ್ಯಾಕೇಜ್‌ನ ಸದ್ಬ ಬಳಕೆಯಾದಲ್ಲಿ ಮಾತ್ರ ಮೂರನೇ ಅಲೆಯನ್ನು ಎದುರಿಸಬಹುದು. ಇಂದಿಗೂ ಲಸಿಕೆಗಳು ಜನರ ಅಗತ್ಯಕ್ಕೆ ತಕ್ಕಷ್ಟು ಸಿಗುತ್ತಿಲ್ಲ. ಲಸಿಕೆ ನೀಡುವಿಕೆಯಲ್ಲಿ ಗ್ರಾಮೀಣ ಪ್ರದೇಶವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಎಲ್ಲರಿಗೂ ಉಚಿತ ಲಸಿಕೆ ಎನ್ನುವ ಪ್ರಧಾನಿಯ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ಸರಕಾರ ನಿರ್ವಹಿಸುತ್ತದೆಯೋ ಅಷ್ಟರಮಟ್ಟಿಗೆ ಮೂರನೇ ಅಲೆಯನ್ನು ತಡೆಯಬಹುದು. ತನ್ನ ಹೊಣೆಯನ್ನು ಸರಿಯಾಗಿ ನಿರ್ವಹಿಸದೇ ಜನರ ಹೊಣೆಯನ್ನು ಪದೇ ಪದೇ ನೆನಪಿಸುವುದು ‘ಮೂರನೇ ಅಲೆ’ಯ ಆರೋಪಗಳಿಂದ ಪಾರಾಗಲು ಸರಕಾರ ತೆಗೆದುಕೊಳ್ಳುತ್ತಿರುವ ನಿರೀಕ್ಷಣಾ ಜಾಮೀನಿನಂತೆ ಕಂಡು ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News