ಕೋವಿಡ್ ಮೂರನೇ ಅಲೆ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ: ಡಾ.ಹೇಮಾ ಸಲಹೆ
ಬೆಂಗಳೂರು, ಜು. 15: `ಸಂಭವನೀಯ ಕೋವಿಡ್-19 ಸೋಂಕಿನ ಮೂರನೆ ಅಲೆ ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಆರಂಭಿಕ ಹಂತದಲ್ಲೆ ರೋಗ ಪತ್ತೆ ಮತ್ತು ಮರಣವನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ' ಎಂದು ಪ್ರಸೂತಿ ತಜ್ಞೆ ಹಾಗೂ ಫೊಗ್ಸಿಯ ನಿಕಟ ಪೂರ್ವ ಅಧ್ಯಕ್ಷೆ ಡಾ.ಹೇಮಾ ದಿವಾಕರ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ಎಲ್ಲ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಆರೈಕೆಯ ಅತ್ಯಾಧುನಿಕ ರೂಢಿಗಳು ಮತ್ತು ಮಾರ್ಗಸೂಚಿಗಳ ತರಬೇತಿ ನೀಡಲು ಸೂಚಿಸಲಾಗಿದೆ. ಮೊದಲ ಅಲೆಯಲ್ಲಿ ಕೋವಿಡ್ ಪ್ರಕರಣಗಳ ಮತ್ತು ಸಂಬಂಧಿಸಿದ ನಿಯಮಗಳ ಕುರಿತು ನಿರ್ವಹಣೆಗೆ ತರಬೇತಿ ನೀಡಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡ ತಪ್ಪಿಸಿ ಕೋವಿಡ್ ಕ್ಲಿನಿಕಲ್ ಮತ್ತು ಗೃಹ ಆಧರಿತ ಆರೈಕೆ ಮಾರ್ಗಸೂಚಿ ಪರಿಣಾಮಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ನಿಶ್ಚಿತ ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆಗಳನ್ನು ಅಭಿವೃದ್ಧಿ ಮತ್ತು ಸಂವಹನ ನಡೆಸಲು ಆದ್ಯತೆ ನೀಡಬೇಕು. ಸಾಂಕ್ರಾಮಿಕದ ಸಂದರ್ಭದಲ್ಲಿ ಒತ್ತಡ ಕಡಿಮೆ ಮಾಡಬೇಕೆಂದು ಅವರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫನಾ) ಅಧ್ಯಕ್ಷ ಡಾ.ಪ್ರಸನ್ನ ಎಚ್.ಎಂ., ಕಾರ್ಯದರ್ಶಿ ಡಾ.ರಾಜಶೇಖರ್ ವೈ.ಎಲ್. ಸೇರಿದಂತೆ ಇನ್ನಿತರರು ಈ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆಂದು ಪ್ರಕಟಣೆ ತಿಳಿಸಿದೆ.