×
Ad

ಕೋಲಾರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ

Update: 2021-07-15 22:56 IST

ಕೋಲಾರ, ಜು. 15: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅಬ್ಬಣಿ ಶಿವಪ್ಪ ಸಾಮೂಹಿಕ ನಾಯಕತ್ವದಲ್ಲಿ ಹಲವಾರು ಬಾರಿ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆಯೆಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರ್ಕಾರಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದಿದ್ದು,ವಾಸ್ತವವಾಗಿ ರೈತ ವಿರೋಧಿ ನೀತಿಗಳಿಂದ ಕೃಷಿ ಕ್ಷೇತ್ರ ನಷ್ಟ ಅನುಭವಿಸಿ ನಾಶವಾಗುವ ಲಕ್ಷಣಗಳು ಕಾಣುತ್ತಿವೆಯೆಂದು ದೂರಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ನಾಲ್ಕು ತಿಂಗಳು ಕಳೆದರೂ  ಹಣ ಪಾವತಿಸಿಲ್ಲ, ಕೂಡಲೇ ರೈತರಿಗೆ ಹಣ ಪಾವತಿ ಮಾಡಬೇಕು, ಸರ್ವೇಯರ್ ಗಳ ಕೊರತೆ ನಿವಾರಣೆ ಮಾಡಿ ಬಾಕಿ ಇರುವ 25 ಸಾವಿರ ಅರ್ಜಿಗಳ ವಿಲೇವಾರಿ ಮಾಡಬೇಕು, ತಿದ್ದುಪಡಿ ಮಾಡಲು ಆದಾಲತ್ ನಡೆಸಬೇಕು,ರೈತರಿಗೆ ನೀಡುತ್ತಿದ್ದ ಸಹಾಯ ಧನಹಿಂದಿನಂತೆ ಮುಂದುವರಿಸಬೇಕು, ಕೆ.ಸಿ.ವ್ಯಾಲಿ ನೀರನ್ನು 3 ನೇ ಹಂತದಲ್ಲಿ ಸಂಸ್ಕರಣೆ ಮಾಡಬೇಕು,ಎತ್ತಿನ ಹೊಳೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು, ರೈತರ ಎಲ್ಲಾ ಸಾಲಗಳ  ಮೇಲಿನ ಬಡ್ಡಿ ಸಂಪೂರ್ಣವಾಗಿ ಕೈ ಬಿಡಬೇಕು,ಪಿ.ನಂಬರ್ ತೆಗೆಯಬೇಕು, ರೈತರು ಬಳಸುವ ಪೆಟ್ರೋಲ್ ಡೀಸೆಲ್ ಗೆ ಸಹಾಯಧನ ನೀಡಬೇಕು, ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಬೇಕು, ಖಾಸಗಿ ಶಾಲೆ ಗಳು ವರ್ಗಾವಣೆ ಪತ್ರವನ್ನು ಯಾವುದೇ ತಕರಾರು ಮಾಡದೆ ನೀಡುವಂತೆ ಆದೇಶಿಸಬೇಕು,ಫಸಲ್ ಭೀಮಾ ಬೆಳೆ ವಿಮಾ ಯೋಜನೆ ಪರಿಷ್ಕರಿಸಬೇಕು, ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು,ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯ ಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಮುಖಂಡ ಬಿಸನಹಳ್ಳಿ ಬೈಚೇಗೌಡ, ಜಿಲ್ಲಾ ಉಪಾಧ್ಯಕ್ಷರುಗಳಾದ ಹೊಳಲಿ ಹೊಸೂರು ಚಂದ್ರಪ್ಪ, ವರದೇನಹಳ್ಳಿ ನಾಗರಾಜ, ಜಿಲ್ಲಾ ಕಾರ್ಯದರ್ಶಿ ವೀರಾಪುರ ಮಂಜುನಾಥ್, ಕೋಲಾರ ತಾ.ಅಧ್ಯಕ್ಷ ಕೆ.ಆನಂದ್ ಕುಮಾರ್, ಬಂಗಾರಪೇಟೆ ತಾ.ಅಧ್ಯಕ್ಷ ತಿಮ್ಮಾರೆಡ್ಡಿ, ಮಾಲೂರು ತಾ.ಅಧ್ಯಕ್ಷ ತಿಪ್ಪಸಂದ್ರ ಹರೀಶ್, ಶ್ರೀನಿವಾಸಪುರ ತಾ.ಅಧ್ಯಕ್ಷ ನಾಗರಾಜಗೌಡ ಸೇರಿದಂತೆ ಹಲವಾರು ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News