×
Ad

ಬಕ್ರೀದ್ ಹಿನ್ನೆಲೆ: ಮಸೀದಿಗಳಲ್ಲಿಯೇ ನಮಾಝ್ ಗೆ ಮೌಲಾನ ಇಮ್ರಾನ್ ರಶಾದಿ ಕರೆ

Update: 2021-07-16 17:34 IST

ಬೆಂಗಳೂರು, ಜು.16: ಕೋವಿಡ್ ಹಿನ್ನೆಲೆ ರಾಜ್ಯ ಸರಕಾರದ ಮಾರ್ಗಸೂಚಿ ಅನುಸರಿಸಿಕೊಂಡು ಬಕ್ರೀದ್ ನಮಾಝ್ ಅನ್ನು ಮಸೀದಿಗಳಲ್ಲಿಯೇ ನಿರ್ವಹಿಸುವಂತೆ ನಗರದ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ ಕರೆ ನೀಡಿದ್ದಾರೆ.

ಜು.21ರಂದು ರಾಜ್ಯಾದ್ಯಂತ ಬಕ್ರೀದ್ ಆಚರಣೆ ಮಾಡಲಾಗುತ್ತಿದ್ದು, ದೇಶದಲ್ಲಿ ಕೋವಿಡ್ ಸೋಂಕು ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ, ಸರಕಾರದ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಪ್ರತಿಯೊಬ್ಬರು ಶಾಂತಿ, ಸೌಹಾರ್ದ ಕಾಪಾಡಬೇಕು ಎಂದು ತಿಳಿಸಿದ್ದಾರೆ.

ಹಬ್ಬದ (ಈದ್) ನಮಾಝ್ ಅನ್ನು ಮಸೀದಿಯಲ್ಲಿ ನಿರ್ವಹಿಸಬೇಕು. ಜತೆಗೆ, ನಮಾಝ್ ಸಂದರ್ಭದಲ್ಲಿ ಸುರಕ್ಷಿತ ತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮುಂಜಾನೆಯೇ ಈದ್ ನಮಾಝ್ ಅನ್ನು ನಿರ್ವಹಿಸಿದರೆ ಉತ್ತಮವಾಗಿದ್ದು, ಯಾವುದೇ ಕಾರಣಕ್ಕೂ ಈದ್ಗಾ ಮೈದಾನಗಳು ಮತ್ತು ಬೀದಿಗಳಲ್ಲಿ ಈದ್ ನಮಾಝ್ ನಿರ್ವಹಿಸದಂತೆ ಅವರು ಮನವಿ ಮಾಡಿದ್ದಾರೆ.

ಇನ್ನು, ಬಕ್ರೀದ್ ಹಬ್ಬದಂದು ಬಲಿದಾನ ಪ್ರಮುಖವಾಗಿದ್ದು, ಮೂರು ದಿನಗಳ ಈ ಅವಧಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ನೀಡಬೇಕು. ತ್ಯಾಜ್ಯವೂ ಹೊರಗೆ ಎಸೆಯಬಾರದು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಬಲಿದಾನ ಕುರಿತ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ಸೂಕ್ತವಲ್ಲ. ಪ್ರಾಣಿಗಳನ್ನು ಬೀದಿಗೆ ತಂದು ಪ್ರದರ್ಶನ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಮೌಲಾನ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News