×
Ad

ಶಾಲೆ ಕಾರ್ಯಪಡೆ ಸಮಿತಿ ಅವೈಜ್ಞಾನಿಕ: ಲೋಕೇಶ್ ತಾಳಿಕಟ್ಟೆ ಆರೋಪ

Update: 2021-07-16 17:42 IST

ಬೆಂಗಳೂರು, ಜು.16: 2021-22ನೇ ಸಾಲಿನಲ್ಲಿ ಶಾಲೆಗಳ ಪ್ರಾರಂಭಿಸುವುದರ ಕುರಿತು ಪರಿಶೀಲನೆ, ಅಗತ್ಯ ಸಲಹೆಗಳನ್ನು ನೀಡುವ ಸಂಬಂಧ ಶಿಕ್ಷಣ ಸಚಿವ ಸುರೇಶ್‍ಕುಮಾರ್ ರಚಿಸಿರುವ ಕಾರ್ಯಪಡೆ ಸಮಿತಿಯಲ್ಲಿ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದವರು ಒಬ್ಬ ಸದಸ್ಯರು ಇಲ್ಲವೆಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲೆ ಆರಂಭದ ಕುರಿತು ರಚಿಸುವ ಕಾರ್ಯಪಡೆ ಸಮಿತಿಯಲ್ಲಿ ಶಾಲಾ ಆಡಳಿತ ಮಂಡಳಿ, ಪೋಷಕರ ಮಂಡಳಿ ಹಾಗೂ ಎಸ್‍ಡಿಎಂಸಿ ಸದಸ್ಯರನ್ನು ನೇಮಿಸಬೇಕೆಂದು ರಾಜ್ಯ ಕೋವಿಡ್ ತಾಂತ್ರಿಕ ಕಾರ್ಯಪಡೆಯ ಅಧ್ಯಕ್ಷ ಡಾ.ದೇವಿಶೆಟ್ಟಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹಾಗೂ ಸಚಿವ ಸುರೇಶ್‍ಕುಮಾರ್ ಇದೇ ರೀತಿಯಲ್ಲಿ ಭರವಸೆ ನೀಡಿದ್ದರು. ಆದರೆ, ನೆನ್ನೆ ರಚಿಸಿರುವ ಕಾರ್ಯಪಡೆ ಸಮಿತಿಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ. 

ಕೋವಿಡ್ ಆತಂಕ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕಳೆದ ಎರಡು ವರ್ಷದಿಂದ ಗೊಂದಲಕಾರಿ, ಅವೈಜ್ಞಾನಿಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಾಡಿನ ಶೈಕ್ಷಣಿಕ ವ್ಯವಸ್ಥೆಯೇ ಸಮಸ್ಯೆಗೆ ಸಿಲುಕಿದೆ. ಈ ಬಗ್ಗೆ ಎಷ್ಟು ಎಚ್ಚರಿಸಿದರು ಸಚಿವರು ತಮ್ಮ ಸರ್ವಾಧಿಕಾರಿ ನೀತಿಗಳಿಂದ ಹೊರಬರುತ್ತಿಲ್ಲವೆಂದು ಅವರು ವಿಷಾದಿಸಿದ್ದಾರೆ. 

ಖಾಸಗಿ ಶಾಲಾ ಶಿಕ್ಷಕರ, ಆಡಳಿತ ಮಂಡಳಿಗಳ ಸಂಘ, ಸಂಸ್ಥೆಗಳು ಶಿಕ್ಷಣ ಸಚಿವ ಸುರೇಶ್‍ಕುಮಾರ್‍ಗೆ ಹಲವು ವಿಷಯಗಳ ಕುರಿತು ಮನವಿ ಪತ್ರದ ಮುಖೇನ ತಮ್ಮ ಸಲಹೆ-ಸೂಚನೆಗಳನ್ನು ನೀಡಲಾಗಿದೆ. ಆದರೆ, ನಮ್ಮ ಯಾವ ಸಲಹೆಗಳನ್ನು ಅವರು ಪಡೆದುಕೊಳ್ಳುತ್ತಿಲ್ಲ. ಕನಿಷ್ಟ ನಮ್ಮೊಂದಿಗೆ ಸರಿ ತಪ್ಪುಗಳ ಕುರಿತು ಚರ್ಚೆಗೂ ಆಹ್ವಾನಿಸುವುದಿಲ್ಲ. ಸಚಿವರ ಇಂತಹ ಧೋರಣೆಯಿಂದಾಗಿ ಶಿಕ್ಷಣ ಕ್ಷೇತ್ರವು ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News