ಇತರ ರಾಜ್ಯದ ಮಾಡೆಲ್‌ ನೋಡುವುದಕ್ಕೆಂದೇ ರಾಜ್ಯದ ತೆರಿಗೆ ಹಣ ಖರ್ಚಾಗುತ್ತಿದೆ: ಕುಮಾರಸ್ವಾಮಿ

Update: 2021-07-16 13:02 GMT

ಬೆಂಗಳೂರು, ಜು.16: ನಮ್ಮ ರಾಜ್ಯದ ತೆರಿಗೆ ದುಡ್ಡನ್ನು ಅನ್ಯ ರಾಜ್ಯದ ಮಾಡೆಲ್ ನೋಡುವುದಕ್ಕೆ ಅನಗತ್ಯವಾಗಿ ಖರ್ಚು ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಗುಜರಾತ್ ಮಾಡೆಲ್ ನೋಡುವುದಕ್ಕೆ ಅಲ್ಲಿಗೆ ಹೋಗುತ್ತಿದ್ದಾರೆ. ಆದರೆ, ಮಾಡೆಲ್ ನೋಡುವುದಕ್ಕೆ ಅನಗತ್ಯವಾಗಿ ರಾಜ್ಯದ ದುಡ್ಡು ಖರ್ಚು ಮಾಡಬೇಡಿ ಎಂದರು.

ಉತ್ತರ ಪ್ರದೇಶ ಚುನಾವಣೆ ಇರುವುದರಿಂದ ಈಗ ಅಯೋಧ್ಯೆ ಸಿಟಿಯ ಅಭಿವೃದ್ಧಿ ಬಗ್ಗೆ ತ್ರಿಡಿಯಲ್ಲಿ ತೋರಿಸುತ್ತಿದ್ದಾರೆ ಎಂದ ಅವರು, 2008ರಲ್ಲೂ ಗುಜರಾತ್‍ನಲ್ಲಿ ನರೇಂದ್ರ ಮೋದಿ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಒಂದು ಡೊಲೆರಾ ಗಿಫ್ಟ್ ಸಿಟಿ, ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದಿದ್ದರು.

ಬಳಿಕ ಅದರ ಒಂದು ತ್ರಿಡಿ ವಿಡಿಯೊ ಮಾಡಿ ಚುನಾವಣೆ ವೇಳೆ ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರು. ಈಗ ಡೊಲೆರಾ ಸಿಟಿಯ ಕಾಮಗಾರಿ ಸಾಗುತ್ತಿರುವುದನ್ನು ಗಮನಿಸಿದರೆ ಇನ್ನೂ ನೂರು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News