ಉನ್ನತ ಶಿಕ್ಷಣ: ಬ್ರಿಟಿಷ್ ಕೌನ್ಸಿಲ್ ಜತೆ ದುಂಡುಮೇಜಿನ ಸಭೆ ನಡೆಸಿದ ಡಿಸಿಎಂ ಅಶ್ವತ್ಥನಾರಾಯಣ

Update: 2021-07-16 17:11 GMT

ಬೆಂಗಳೂರು, ಜು.16: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹು ಆಯಾಮಗಳ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಎರಡನೇ ದುಂಡುಮೇಜಿನ ನೀತಿ ಸಂವಾದ ನಡೆಯಿತು.

ಶುಕ್ರವಾರ ನಡೆದ ವರ್ಚುಯಲ್ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಕೋವಿಡ್ ಬಿಕ್ಕಿಟ್ಟಿನ ನಂತರ ಶೈಕ್ಷಣಿಕ ಕ್ಷೇತ್ರವು ಬಹುದೊಡ್ಡ ಬದಲಾವಣೆ ಹಂತದಲ್ಲಿದೆ. ಇದಕ್ಕೆ ಪೂರಕವಾಗಿ ರಾಷ್ಡ್ರೀಯ ಶಿಕ್ಷಣ ನೀತಿಯೂ ಜಾರಿ ಆಗುತ್ತಿರುವುದರಿಂದ ಶಿಕ್ಷಣ ಸುಧಾರಣೆಗಳು ವೇಗವಾಗಿ ಕಾರ್ಯರೂಪಕ್ಕೆ ಬರಲಿವೆ ಎಂದರು.

ಈ ನೀತಿಯೂ ಬಹುಶಿಸ್ತೀಯ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಕಲಿಕೆ ಮತ್ತು ಬೋಧನೆಯ ಸ್ವರೂಪವೇ ವಿಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳ ಜ್ಞಾನಾರ್ಜನೆ ವೃದ್ಧಿಸುವುದರ ಜತೆಗೆ, ಅವರ ಕುಶಲತೆಯನ್ನು ಹೆಚ್ಚಿಸಿ ಕೈಗಾರಿಕೆಗಳಿಗೆ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಗೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಅವರು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾಮಿಕ್ಸ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಭಾನುಮೂರ್ತಿ, ಲಂಡನ್‍ನ ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್ ಸಂಸ್ಥೆಯ ಪ್ರೊ.ಪ್ರಶಾಂತ್ ಝಾ, ನ್ಯೂ ಕ್ಯಾಸ್ಟಲ್ ವಿವಿಯ ಸಂಯೋಜಿತ ಕೇಂದ್ರದ ನಿರ್ದೇಶಕರಾದ ಸಾರಾ ಗ್ರಹಾಂ, ಬ್ರಿಟೀಷ್ ಕೌನ್ಸಿಲ್‍ನ ದಕ್ಷಿಣ ಭಾರತೀಯ ನಿರ್ದೇಶಕರಾದ ಜನಕಾ ಪುಷ್ಪನಾಥನ್ ಹಾಗೂ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ ಮುಂತಾದವರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News