ಸಿಎಂ ಯಡಿಯೂರಪ್ಪ ದಿಲ್ಲಿಗೆ ತೆರಳುವ ವೇಳೆ ಆರು ಬ್ಯಾಗ್‍ಗಳನ್ನು ಕೊಂಡೊಯ್ದಿದ್ದು ಏಕೆ?: ಎಚ್.ಡಿ. ಕುಮಾರಸ್ವಾಮಿ

Update: 2021-07-17 12:02 GMT

ಬೆಂಗಳೂರು, ಜು. 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ನಿನ್ನೆ ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ತೆರಳುವ ಸಂದರ್ಭದಲ್ಲಿ ತಮ್ಮೊಂದಿಗೆ ಆರು ದೊಡ್ಡ-ದೊಡ್ಡ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗಿದ್ದು, ಪ್ರಧಾನಿ ಸಹಿತ ವರಿಷ್ಟರಿಗೆ ಉಡುಗೊರೆ ನೀಡಲು ಹೋದರೆ ಅಥವಾ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಹೋದರೋ ಗೊತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಿಎಸ್‍ವೈ ಅವರು ವಿಶೇಷ ವಿಮಾನದಲ್ಲಿ ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದು, ಅವುಗಳಲ್ಲಿ ಉಡುಗೊರೆ ಇದೆಯೋ, ಬೇರೆ ಏನಾದರೂ ಇದೆಯೋ ಎನ್ನುವುದನ್ನು ಅವರೇ ಹೇಳಬೇಕು. ಆದರೆ, ಅವರು ಬ್ಯಾಗ್ ತೆಗೆದುಕೊಂಡು ಹೋಗಿರುವ ಮಾಹಿತಿ ನನಗೆ ಬಂದಿರುವುದಂತೂ ಹೌದು" ಎಂದು ತಿಳಿಸಿದರು.

ಮೇಕೆದಾಟು ಚರ್ಚೆಯೇ ಮಾಡಿಲ್ಲ: ಮೇಕೆದಾಟು ಮತ್ತು ಮಹದಾಯಿ ಯೋಜನೆಯ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆಯನ್ನೆ ಮಾಡಿಲ್ಲ ಎಂಬುದು ಬಹಿರಂಗವಾಗಿದೆ. ಆದರೆ, ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಆಕ್ಷೇಪಿಸಿದ ಕುಮಾರಸ್ವಾಮಿ, ಕೇಂದ್ರ ಸಚಿವ ರಾಜ್ಯಕ್ಕೆ ಬಂದಿದ್ದು ಜಲಜೀವನ್ ಮೀಷನ್ ಯೋಜನೆ ಅನುಷ್ಠಾನ ಸಂಬಂಧ ಎಂದು ಹೇಳಿದರು.

ಕರುನಾಡಿನಲ್ಲಿ ಕನ್ನಡಗರಿಂದಲೇ ಆಡಳಿತ: ಮುಂಬರುವ ವಿಧಾನಸಭೆ ಚುನಾವಣೆಗೆ ಸೆಮಿ ಫೈನಲ್ ಎಂದೇ ಹೇಳಲಾಗುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ವಿಶೇಷ ಆಸ್ಥೆ ವಹಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ರಾಷ್ಟ್ರೀಯ ಪಕ್ಷಗಳಿಂದ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸಲು ಪ್ರಾದೇಶಿಕ ಅಸ್ಮಿತೆ ಉಳಿಸಲು ಕನ್ನಡನಾಡಿನಲ್ಲಿ ಕನ್ನಡಿಗರಿಂದಲೇ ಆಡಳಿತ ನಡೆಸಬೇಕೆಂಬ ಧ್ಯೇಯದೊಂದಿಗೆ 2022ರ ಜನವರಿಯಿಂದ ಒಂದು ವರ್ಷಗಳ ಕಾಲ ಪಕ್ಷ ಸಂಘಟನೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದ ಅವರು, ಪಕ್ಷಕ್ಕೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದು, ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು. ಹೊಸದಾಗಿ ಬರುವವರು ಯಾವುದೇ ಕಾರಣಕ್ಕೂ ವಿಜಿಟಿಂಗ್ ಕಾರ್ಡ್‍ಗೆ ಸೀಮಿತವಾಗದೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಯಾರೇ ಹೋರಾಟ ಮಾಡಿದರೂ ಅವರಿಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ. ಮಾತ್ರವಲ್ಲ ಅಕ್ರಮ ಗಣಿಗಾರಿಕೆ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ನೆಲ, ಜಲದ ವಿಚಾರದಲ್ಲಿ ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News