ಮಾಜಿ ಸಂಸದ ಮಾದೇಗೌಡ ನಿಧನ
ಮಂಡ್ಯ, ಜು.17: ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲೆಯ 'ಸೋಲಿಲ್ಲದ ಸರದಾರ' ಎಂಬ ಖ್ಯಾತಿಯ ಹಿರಿಯ ರಾಜಕಾರಣಿ, ರಾಜಕೀಯ ಮುತ್ಸದ್ದಿ, ಮಾಜಿ ಸಂಸದ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ(94) ಶನಿವಾರ ಸಂಜೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು, ತಾವೇ ಸ್ಥಾಪಿಸಿದ್ದ ಮದ್ದೂರು ತಾಲೂಕು ಕಾಳಮುದ್ದನದೊಡ್ಡಿ(ಭಾರತಿ ನಗರ)ಯ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಹಾಸ್ಟಿಲನ್‍ನಲ್ಲಿ ಸಂಜೆ 7.41ರ ವೇಳೆಗೆ ಕೊನೆ ಉಸಿರೆಳೆದರು.
ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಓಡಾಡುತ್ತಿದ್ದ ಮಾದೇಗೌಡರು ಕೆಲವು ವಾರಗಳ ಹಿಂದೆ ಅನಾರೋಗ್ಯಕ್ಕೀಡಾದಾಗ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ವ ಚೇತರಿಕೆಯ ನಂತರ, ಅವರದೇ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು.
ರಾಷ್ಟ್ರಕವಿ ಕುವೆಂಪು ಅವರಿಂದ ‘ನಿತ್ಯಸಚಿವ’ ಬಿರುದಾಂಕಿತಕ್ಕೆ ಪಾತ್ರರಾಗಿದ್ದ ಜಿಲ್ಲೆಯ ಸಾಧಕ ರಾಜಕಾರಣಿ ಕೆ.ವಿ.ಶಂಕರಗೌಡರ ಶಿಷ್ಯರಾಗಿ ಬೆಳೆದು, ಅವರ ಆದರ್ಶಗಳಿಂದ ಪ್ರಭಾವಿ, ಜನಪ್ರಿಯ, ಜನಪರ ರಾಜಕಾರಣಿಯಾಗಿ ಬೆಳೆದ ಮಾದೇಗೌಡರ ನಿಧನದಿಂದ ಶಂಕರಗೌಡರ ಶಿಷ್ಯ ಪರಂಪರೆಯ ಕೊನೆಯ ಕೊಂಡಿ ಕಳಚಿಬಿದ್ದಿದೆ.
ಜು.10ರಂದು ಅವರ 94ನೇ ಜನ್ಮದಿನ. ಆಸ್ಪತ್ರೆ ಸಿಬ್ಬಂದಿ ಮತ್ತು ಅಭಿಮಾನಿಗಳು ಆಸ್ಪತ್ರೆಯಲ್ಲೇ ಅವರಿಂದ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದರು. ಜತೆಗೆ, ಅವರ ಹೆಸರಿನಲ್ಲಿ 21 ವರ್ಷದಿಂದ ಕೊಡಮಾಡುತ್ತಿರುವ ಸಮಾಜಸೇವಾ ರಾಜ್ಯಮಟ್ಟದ ಪ್ರಶಸ್ತಿಯನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪ್ರದಾನ ಮಾಡಲಾಗಿತ್ತು.
ಮದ್ದೂರು ತಾಲೂಕು ಗುರುದೇವರಹಳ್ಳಿಯ ಅವಿಭಕ್ತ ರೈತಕುಟುಂಬದಲ್ಲಿ ಜನಿಸಿದ್ದ ಮಾದೇಗೌಡರು, ರಾಜಕೀಯ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾದರೂ, ತಮ್ಮ ಜೀವಮಾವವಿಡೀ ಗ್ರಾಮೀಣ ಜನರು ಮತ್ತು ರೈತ ಸಮುದಾಯದ ಸೇವೆಗೆ ಸಮರ್ಪಿಸಿಕೊಂಡಿದ್ದ ಅಪರೂಪದ ಜನಪ್ರತಿನಿಧಿಯಾಗಿದ್ದರು.
ಮಾದೇಗೌಡರಿಗೆ ಪತ್ನಿ ಜೆ.ಪಿ.ಪದ್ಮ, ಪತ್ರರಾದ ಡಾ.ಜಿ.ಎಂ.ಪ್ರಕಾಶ್, ವಿಧಾನಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಪುತ್ರಿಯರಾದ ಜಿ.ಎಂ.ಶಶಿಕಲಾ, ಜಿ.ಎಂ.ಶೀಲಾವತಿ ಸೇರಿದಂತೆ ಅಪಾರ ಬಂಧುಬಳಗ ಇದೆ.