×
Ad

ಜಾನುವಾರುಗಳ ಅಧಿಕೃತ ಮಾರಾಟ ನಿಷೇಧ: ಕಲಬುರಗಿ ಜಿಲ್ಲಾಧಿಕಾರಿ ಆದೇಶ ಪರಿಷ್ಕರಣೆಗೆ ಪಶುಸಂಗೋಪನಾ ಇಲಾಖೆ ಮನವಿ

Update: 2021-07-17 20:22 IST

ಕಲಬುರಗಿ, ಜು.17: ಜು.21ರವರೆಗೆ ಕಲಬುರಗಿ ಜಿಲ್ಲೆಯಲ್ಲಿ ಜಾನುವಾರುಗಳ ಅಧಿಕೃತ ಮಾರಾಟ, ಸಾಗಾಣಿಕೆ ಮಾಡುವುದು ಮತ್ತು ಜಾನುವಾರುಗಳ ಜಾತ್ರೆಗಳನ್ನು ನಿಷೇಧಿಸಿ ಜು.13ರಂದು ಹೊರಡಿಸಿರುವ ಆದೇಶವನ್ನು ಪರಿಷ್ಕರಿಸುವಂತೆ ಪಶುಸಂಗೋಪನೆ ಇಲಾಖೆಯು, ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. 

ರಾಜ್ಯಾದ್ಯಂತ ಜು.21ರಂದು ಬಕ್ರೀದ್ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ 2020ರ ಅನ್ವಯ, ಕಲಬುರಗಿ ಜಿಲ್ಲೆಯಾದ್ಯಂತ ಜಾನುವಾರುಗಳ ಅಧಿಕೃತ ಮಾರಾಟ,ಸಾಗಾಣಿಕೆ ಮಾಡುವುದು ಮತ್ತು ಜಾನುವಾರುಗಳ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಜಿಲ್ಲಾಧಿಕಾರಿ ಅವರು ಅಧಿಕೃತ ಜಾನುವಾರುಗಳ ಮಾರಾಟವನ್ನೂ ನಿಷೇಧಿಸಿರುವುದಕ್ಕೆ ಸ್ಥಳೀಯ ಜಾನುವಾರುಗಳ ವ್ಯಾಪಾರಿಗಳು, ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಜು. 17ರಂದು ‘ವಾರ್ತಾಭಾರತಿ’ಯು ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು.

ಜಾನುವಾರು ಸಂತೆಯಲ್ಲಿ ಪೊಲೀಸರಿಂದ ಲಾಠಿ ಜಾರ್ಜ್: ಆರೋಪ

ನಗರದ ಎಪಿಎಂಸಿ ಸಮೀಪದ ಕುಮಸಿ ಹೋಟಲ್ ಹತ್ತಿರ ಜಾನುವಾರು ಸಂತೆಯಲ್ಲಿ ಪೊಲೀಸರು ಲಾಠಿ ಜಾರ್ಜ್ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ ಎಂದು ಸ್ಥಳೀಯ ವ್ಯಾಪಾರಿಗಳು ಆರೋಪಿಸಿದ್ದಾರೆ.

ಎಪಿಎಂಸಿ ಸಂತೆಯಲ್ಲಿ ಪ್ರತಿ ಶನಿವಾರ ಕುರಿ, ಮೇಕೆ, ಆಡು ಹಾಗೂ ಕೋಳಿಗಳ ಸಂತೆ ನಡೆಯುತ್ತದೆ. ಎಂದಿನಂತೆ ಇಂದು ಸಹ ವ್ಯಾಪಾರಿಗಳು ಮತ್ತು ರೈತರು ಸಂತೆಗೆ ಆಗಮಿಸಿದ್ದರು. ಈ ವೇಳೆಯಲ್ಲಿ ಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜನರನ್ನು ಚದುರಿಸಲು ಲಾಠಿ ಪ್ರಹಾರ ಮಾಡಿ ಕೆಲವರನ್ನು ಠಾಣೆಗೆ ಕರೆದುಕೊಂಡು ಹೋಗಿ ಬಸ್ಕಿ ಹೋಡಿಸಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಚೌಕ್ ಪೊಲೀಸ್ ಠಾಣೆಯ ಪಿಎಸ್‍ಐ ‘ವಾರ್ತಾ ಭಾರತಿ’  ಪ್ರತಿನಿಧಿಯೊಂದಿಗೆ ಮಾತನಾಡಿದ್ದು, ಕೋವಿಡ್ ನಿಯಮ ಪಾಲನೆ ಹಿತದೃಷ್ಟಿಯಿಂದ ಸಂತೆಯಲ್ಲಿದ್ದ ಜನರನ್ನು ಚದುರಿಸಲಾಗಿದೆ. ಸಂತೆಯಲ್ಲಿ ಲಾಠಿ ಚಾರ್ಜ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News