ಜಿಲ್ಲೆಯ ಎಲ್ಲ ವಿಚಾರಗಳಲ್ಲೂ ಸಿ.ಟಿ.ರವಿಯಿಂದ ಏಕಪಕ್ಷೀಯ ನಿರ್ಧಾರ: ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿ ಆಕ್ರೋಶ
ಚಿಕ್ಕಮಗಳೂರು, ಜು.17: ಜಿಲ್ಲೆಯ ಎಲ್ಲ ವಿಚಾರಗಳಲ್ಲೂ ಸಿ.ಟಿ.ರವಿಯವರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಮೂಡಿಗೆರೆ ಮೀಸಲು ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಆಕ್ರೋಶ ಹೊರಹಾಕಿದ್ದಾರೆ.
ಕೆಲ ದಿನಗಳ ಹಿಂದೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಕೆಲ ಶಾಸಕರು ಗುಪ್ತ ಸಭೆ ನಡೆಸಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಇದರ ಬೆನ್ನಲ್ಲೇ ಮೂಡಿಗೆರೆ ಕ್ಷೇತ್ರ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಸಿ.ಟಿ.ರವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ವರ್ಗಾವಣೆಯಾದರೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಈ ವಿಷಯವನ್ನು ನನ್ನ ಗಮನಕ್ಕೆ ತರುವುದಿಲ್ಲ. ಎಲ್ಲ ವಿಚಾರಗಳಲ್ಲೂ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ’ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿನ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕಾದರೆ ಕೋರ್ ಕಮಿಟಿಯಲ್ಲಿ ಚರ್ಚಿಸಬೇಕು. ಇದು ಉಸ್ತುವಾರಿ ಸಚಿವರಿಂದಲೇ ಆಗಬೇಕು ಎಂಬ ತೀರ್ಮಾನ ಆಗಿತ್ತು. ಆದರೆ, ಈ ವಿಚಾರದಲ್ಲಿ ಇದ್ಯಾವುದು ನಡೆಯುತ್ತಿಲ್ಲ’ ಎಂದು ಸಿಟಿ ರವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
‘ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ವರ್ಗಾವಣೆ ಬಗ್ಗೆ ತಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಏಕೆಂದರೆ, ನಮ್ಮಲ್ಲಿ ಅರಣ್ಯ ಸಮಸ್ಯೆ ತೀವ್ರವಾಗಿದೆ. ನುರಿತ ಮತ್ತು ತಾಳ್ಮೆಯುಳ್ಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೇಕಿದೆ. ಸಿ.ಟಿ.ರವಿ ಕ್ಷೇತ್ರದಲ್ಲಿ ಅರಣ್ಯ ಸಮಸ್ಯೆ ಇಲ್ಲ. ಆದರೂ ಅವರು ಸರಕಾರದ ಬಳಿ ಶಿಫಾರಸು ಮಾಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಂಡು ತಮಗೆ ಬೇಕಾದವರನ್ನು ಹಾಕಿಸಿಕೊಂಡು ಬಂದಿದ್ದಾರೆ. ಹೀಗಾದರೆ ನಮ್ಮ ಸಮಸ್ಯೆ ಪರಿಹಾರ ಹೇಗಾಗುತ್ತೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಯಾಗುತ್ತಿರುವುದು ಉಳಿದ ಶಾಸಕರ ಗಮನಕ್ಕೆ ಬರುವುದಿಲ್ಲ. ಬಂದ ಅಧಿಕಾರಿಗಳು ಸೌಜನ್ಯಕ್ಕೂ ಪರಿಚಯ ಮಾಡಿಕೊಳ್ಳುವುದಿಲ್ಲ. ದಾರಿಯಲ್ಲಿ ಸಿಕ್ಕಾಗ ಪರಿಚಯ ಮಾಡಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಎಲ್ಲವು ಸಿ.ಟಿ.ರವಿಯವರ ಅಣತಿಯಂತೆ ಆಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಳ್ಳೆಯ ಅಧಿಕಾರಿಗಳು ಬರಬೇಕು ಎಂಬುದು ನಮ್ಮ ಯೋಚನೆ’ ಎಂದ ಕುಮಾರಸ್ವಾಮಿ, ‘ಸಿ.ಟಿ.ರವಿಯವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿದ್ದೇನೆ. ಎಲ್ಲವೂ ನಾನು ಹೇಳಿದಂತೆ ಆಗಬೇಕು ಎಂಬ ಮನಸ್ಥಿತಿ ಹೊಂದಿದ್ದಾರೆಂದು ಅನಿಸುತ್ತಿದೆ. ಇದೇ ರೀತಿ ಅವರ ವರ್ತನೆ ಮುಂದುವರಿದರೆ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯನಾಯಕರ ಗಮನಕ್ಕೆ ತರಲಾಗುವುದು’ ಎಂದು ಕುಮಾರ ಸ್ವಾಮಿ ಆಕ್ರೋಶ ಹೊರಹಾಕಿದರು.
ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ನನ್ನ ಕೈಯಲ್ಲಿಲ್ಲ: ಸಿ.ಟಿ.ರವಿ
ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ನನ್ನ ಕೈಯಲ್ಲಿಲ್ಲ, ಪ್ರಮುಖರ ಜೊತೆ ಸಮಲೋಚನೆ ಮಾಡುವ ಪದ್ಧತಿ ನಮ್ಮಲ್ಲಿದೆ. ಯಾವುದೇ ಶಾಸಕರು ಜಿಲ್ಲೆಗೆ ಯಾರನ್ನಾದರೂ ವರ್ಗಾವಣೆ ಮಾಡಿಸಿಕೊಂಡು ಬರಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಜಿಲ್ಲೆಗೆ ಒಳ್ಳೆಯ ಅಧಿಕಾರಿಗಳು ಬರಬೇಕು. ಜನರ ಕೆಲಸ ಮಾಡುವಂತಿರಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕ ಕುಮಾರಸ್ವಾಮಿ ಆರೋಪ ಸಂಬಂಧ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಮಾಲಕನಲ್ಲ. ನಾನು ಪಕ್ಷದ ಕಾರ್ಯಕರ್ತ. ಸದಾ ಕಾಲ ನಿಷ್ಠೆಯಿಂದ ಕೆಲಸ ಮಾಡುವವನು. ನಾನು ಪಕ್ಷದ ಮಾಲಕ ಅನ್ನೋ ಭಾವನೆ ಅವತ್ತು ಇರಲಿಲ್ಲ, ಇವತ್ತೂ ಇಲ್ಲ. ಮಾಲಕತ್ವದ ಪ್ರಶ್ನೆ ಬಂದರೆ ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಟ್ಟು ಕೊಡುತ್ತೇನೆ. ಅವರೇ ನಮ್ಮ ಮಾಲಕರು ಎಂದರು.
ಶಾಸಕ ಕುಮಾರಸ್ವಾಮಿ ಅವರು ಯಾವ ಹಿನ್ನೆಲೆಯಲ್ಲಿ ಈ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ವರ್ಗಾವಣೆ ಆದೇಶವನ್ನು ಮಾಡುವ ಅಧಿಕಾರ ನನಗಿಲ್ಲ. ಅವರ ಜೊತೆ ಮಾತನಾಡಿ ವಿಚಾರಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದರು.