ಕಾಂಗ್ರೆಸ್ ಪಕ್ಷ ಜನರೊಂದಿಗೆ ಇದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-07-17 18:13 GMT

ಸಿಂದಗಿ; ಕಾಂಗ್ರೆಸ್‍ನವರಿಗೆ ರಾಜಕಾರಣ ಹಾಗೂ ಚುನಾವಣೆ ಮುಖ್ಯ ಅಲ್ಲ. ಸಮಾಜಕ್ಕೆ ಆತ್ಮ ಧೈರ್ಯ ತುಂಬುವುದು ಮುಖ್ಯವಾಗಿದೆ. ಕಾಂಗ್ರೆಸ್ ಪಕ್ಷ ಜನರೊಂದಿಗೆ ಇದೆ. ರಾಜ್ಯ ಹಾಗೂ ರಾಷ್ಟ್ರ ಕೋವಿಡ್ ನಿಂದಾಗಿ ನರಳುತ್ತಾ ಇದೆ. ಅಲ್ಲದೇ ದಲಿತರು, ಕಾರ್ಮಿಕರರು ಕೋವಿಡ್ ವೇಳೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದಂತ ಪ್ರವಾಸ ಮಾಡಿ ಕೋವಿಡ್ ಪರಿಹಾರ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಕೊರೋನ ಸಂಕಷ್ಠ, ಅಪೌಷ್ಠಿಕತೆ, ಮೂಲಸೌಕರ್ಯ, ವಲಸೆ ಕಾರ್ಮಿಕರ ಉದ್ಯೋಗ ಮತ್ತಿತರ ವಿಷಯಗಳ ಕುರಿತಾಗಿ ದಲಿತ ಸಮೂದಾಯದವರೊಡನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆಯಾ ವೃತ್ತಿಯಲ್ಲಿ ಆಚರ, ವಿಚಾರಗಳನ್ನು ತಿಳಿದುಕೊಂಡು ಮುಂದಿನ ದಿನಮಾನಗಳನ್ನು ಜನರ ದ್ವನಿಯಾಗಬೇಕು ಎನ್ನುವ ನಂಬಿಕೆಯಲ್ಲಿದ್ದ ದಲಿತರು, ಅಲ್ಪಸಂಖ್ಯಾತರು ಅಸಂಘಟಿತ ಕಾರ್ಮಿಕರು  ಸಂಕಷ್ಟದಲ್ಲಿದ್ದಾರೆ. ಕೊವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಇನ್ನು ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ನಾನೇ ಖುದ್ದಾಗಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಸಮಸ್ಯೆಗಳಿಗೆ ಕೂಡಲೆ ಪರಿಹಾರ ಸಿಗುವದಿಲ್ಲ ಅದನ್ನು ಹಂತ ಹಂತವಾಗಿ ದೊರಕಿಸಿ ಕೊಡುತ್ತೇನೆ ಎಂದರು.

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಸಂವಿಧಾನದ ಆಶಯದಂತೆ ಕಾರ್ಯ ಮಾಡುತ್ತಿದ್ದೇನೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರ ಅಭಿವೃದ್ದಿಗೆ ರೂ. 27 ಸಾವಿರ ಕೋಟಿಗಳಷ್ಟು ಹಣ ಮೀಸಲಿಟ್ಟು ದಲಿತರ ಅಭಿವೃದ್ದಿಗೆ ಶ್ರಮಿಸಿದ್ದೇವೆ. ಆದರೆ ಆ ಯೋಜನೆ ಇಂದು ದಲಿತರಿಗೆ ಮುಟ್ಟುತ್ತಿಲ್ಲ ಎಂಬ ನೋವು ನಮಗೆ ಕಾಡುತ್ತಿದೆ ಎಂದರು.

ದಲಿತ ಮುಖಂಡ ವೈ.ಸಿ.ಮಯೂರ ಮಾತನಾಡಿ, ಸ್ವತಂತ್ರ ದೊರೆತು 70 ದಶಕಗಳು ಕೋಮುವಾದಿ, ಜಾತಿವಾದಕ್ಕೆ ಸಿಲುಕಿ ದಲಿತರು ತತ್ತರಿಸಿಹೋಗಿದ್ದೇವೆ. ಅಲ್ಲದೆ ನಮ್ಮನಾಳುವ ಸರಕಾರಗಳು ಡಾ. ಅಂಬೇಡ್ಕರ ನಿಗಮದಿಂದ ಸಿಗುವಂತ ಸೌಲಭ್ಯಗಳನ್ನು ಕಡಿತಗೊಳಿಸಿದೆ. ಖಾಸಗಿಕರಣದಿಂದ ನಿರೂದ್ಯೋಗ ಸಮಸ್ಯೆ ಉಲ್ಬಣಗೊಂಡಿದ್ದು ಹಂತ ಹಂತವಾಗಿ ನಿವಾರಣೆ ಮಾಡಬೇಕು, ಮತ್ತು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಾತಿನಿಧ್ಯ ಕೊಡುವಂತೆ ಮನವಿ ಮಾಡಿಕೊಂಡರು.

 ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ,  ರಮೇಶ ನಡುವಿನಕೇರಿ ಮಾತನಾಡಿದರು.

ದಲಿತ ಮುಖಂಡರಾದ ಶಿವಾನಂದ ಜಗತಿ, ಶಿವು ಕಾಲೆಬಾಗ, ರಮೇಶ ಗುಬ್ಬೇವಾಡ, ಸಾಯಬಣ್ಣಾ ಪುರದಾಳ, ರಾವುತ ತಳಕೇರಿ, ರಮೇಶ ನಡುವಿನಕೇರಿ ಸೇರಿದಂತೆ ಸಂವಾದ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚು ದಲಿತ ಮುಖಂಡರು ಸಮುದಾಯದ ಸಮಸ್ಯೆಗಳ ಕುರಿತಾಗಿ ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಡಾ. ಸಿದ್ದಲಿಂಗಯ್ಯ ಅವರಿಗೆ ಶ್ರದಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಬಲೇಶ್ವರ ಶಾಸಕ ಡಾ. ಎಂ.ಬಿ.ಪಾಟೀಲ, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಅಭ್ಯರ್ಥಿ ಅಶೋಕ ಮನಗೂಳಿ, ಕಾಂತಾ ನಾಯಕ, ಮೈಬೂಬಸಾಬ ತಾಂಬೋಳಿ, ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ಎಸ್.ಎಮ್.ಪಾಟೀಲ ಗಣಿಹಾರ, ಮಲ್ಲಣ್ಣ ಸಾಲಿ, ಜಿಲ್ಲಾ ವಿಕ್ಷಕ ಅಜಯಕುಮಾರ ಸರನಾಯಕ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

ಜಿಲ್ಲಾಧ್ಯಕ್ಷ ರಾಜು ಆಲಗೂರ ಸ್ವಾಗತಿಸಿ, ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ವಂದಿಸಿದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News