ನಾಯಕತ್ವ ಬದಲಾವಣೆಗೆ ವರಿಷ್ಟರಿಂದ ಯಾವುದೇ ಸಂದೇಶ ಬಂದಿಲ್ಲ: ಸಚಿವ ಆರ್.ಅಶೋಕ್

Update: 2021-07-18 11:15 GMT

ಬೆಂಗಳೂರು, ಜು. 18: `ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ವರಿಷ್ಟರಿಂದ ಯಾವುದೇ ರೀತಿಯ ಸಂದೇಶ ಬಂದಿಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,`ಯಾವುದೇ ಪ್ರಮುಖ ವಿಷಯಗಳನ್ನು ಕೇಂದ್ರ ನಾಯಕರು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಕುರಿತಾಗಿ ಸಂದೇಶ ಬಂದಿಲ್ಲ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇದೆ. ಜತೆಗೆ ಪಕ್ಷದ ಕೇಂದ್ರ ನಾಯಕತ್ವ ಬಲಿಷ್ಠವಾಗಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ' ಎಂದು ಸ್ಪಷ್ಟಪಡಿಸಿದರು.

`ನಾಯಕತ್ವ ಬದಲಾವಣೆ ಚರ್ಚೆ ವಿಚಾರ ನಮ್ಮ ಮುಂದಿಲ್ಲ. ಮುಂದಿನ ಚುನಾವಣೆ ಗೆಲುವಿನ ಬಗ್ಗೆ ಗಮನ ಹರಿಸಿದ್ದೇವೆ. ಏನೇ ತೀರ್ಮಾನ ಇದ್ದರೂ ಕೇಂದ್ರದ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ಮಾಡಿ ಬಂದಿದ್ದಾರೆ. ಕೊರೊನ ಕಾರಣದಿಂದ ಇಷ್ಟು ದಿನ ದಿಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಮುಂದೆ ಪ್ರತಿ ತಿಂಗಳು ದಿಲ್ಲಿಗೆ ಹೋಗುತ್ತೇನೆಂದು ಅವರೇ ಹೇಳಿದ್ದಾರೆ' ಎಂದು ಅಶೋಕ್ ವಿವರಣೆ ನೀಡಿದರು.

ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಔತಣಕೂಟ ನಡೆಯುತ್ತದೆ ಅಷ್ಟೇ. ಶಾಸಕಾಂಗ ಪಕ್ಷದ ಸಭೆ ಎಂದು ನನಗೆ ನೋಟಿಸ್ ಬಂದಿಲ್ಲ. ಔತಣಕೂಟ ಇದೆ, ಈ ವೇಳೆ ನಮ್ಮ ಶಾಸಕರ ಜೊತೆ ಮಾತುಕತೆ ಇದ್ದೆ ಇರುತ್ತದೆ. ನಾವೆಲ್ಲ ಒಟ್ಟಾಗಿದ್ದೇವೆ. ಕೇಂದ್ರ ನಾಯಕರ ಮಾರ್ಗದರ್ಶನದಡಿ ಹೋಗುತ್ತೇವೆ. ಯಾರೋ ಒಂದಿಬ್ಬರು ಮಾತನಾಡಿದರೆ, ಏನೂ ಆಗುವುದಿಲ್ಲ. ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲದಿರುವಾಗ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಶೋಕ್ ತಿಳಿಸಿದರು.

ಕೆಲವರು ದಿಲ್ಲಿಗೆ ಹೋಗುತ್ತಿರುತ್ತಾರೆ. ನಾನೂ ಹೋಗಬೇಕು ಎಂದುಕೊಂಡಿದ್ದೇನೆ. ಸಚಿವ ಬಿ.ಸಿ.ಪಾಟೀಲ್ ದಿಲ್ಲಿಗೆ ಹೋಗುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆ ನಾನು ಸಚಿವ ಸೋಮಶೇಖರ್ ಅವರ ಜತೆ ಮಾತನಾಡಿದ್ದೇನೆ. ನಾವ್ಯಾರೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ವೈಯಕ್ತಿಕ ಕೆಲಸಗಳಿಗೆ ಹೋಗಬಹುದು' ಎಂದು ಸಚಿವ ಆರ್.ಅಶೋಕ್ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News