ಮಂಡ್ಯ: ಸರಕಾರಿ ಗೌರವದೊಂದಿಗೆ ಡಾ.ಜಿ.ಮಾದೇಗೌಡರ ಅಂತ್ಯಸಂಸ್ಕಾರ

Update: 2021-07-18 18:46 GMT

ಮಂಡ್ಯ, ಜು.18: ಕಾವೇರಿ ಚಳವಳಿ ಹರಿಕಾರ, ರಾಜಕೀಯ ಮುತ್ಸದ್ದಿ ಡಾ.ಜಿ.ಮಾದೇಗೌಡ ಅವರ ಅಂತಿಮ ಸಂಸ್ಕಾರ ಮದ್ದೂರು ತಾಲೂಕು ಕಾಳಮುದ್ದನದೊಡ್ಡಿ ಬಳಿ ಇರುವ ಹನುಮಂತನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ರವಿವಾರ ನೆರವೇರಿತು.

ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ, ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಹಲವರು ಗಣ್ಯರು ಹಾಗೂ ಸಹಸ್ರಾರು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಶನಿವಾರ ರಾತ್ರಿ ಕೆ.ಎಂ.ದೊಡ್ಡಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದ ಮಾದೇಗೌಡರ ಪಾರ್ಥೀವ ಶರೀರವನ್ನು ರವಿವಾರ ಮುಂಜಾನೆ ಮಂಡ್ಯದ ಬಂದಿಗೌಡ ಬಡಾವಣೆಯ ಅವರ ಮನೆಗೆ ತಂದು, ಗಾಂಧಿಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು,

ಜಿಲ್ಲೆಯಲ್ಲದೆ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯರು, ರೈತ, ದಲಿತ, ಜನಪರ ಸಂಘಟನೆಗಳ ಮುಖಂಡರು ಹಾಗೂ ನೂರಾರು ಮಂದಿ ಸಾರ್ವಜನಿಕರು ಪಾರ್ಥೀವ ಶರೀರಕ್ಕೆ ವಂದಿಸಿ ಅಂತಿಮ ನಮನ ಸಲ್ಲಿಸಿದರು.

ನಂತರ ಬೆಂಗಳೂರು ಮೈಸೂರು ಹೆದ್ದಾರಿ ಮಾರ್ಗವಾಗಿ ಮದ್ದೂರಿನ ಟಿ.ಬಿ. ವೃತ್ತದ ಮೂಲಕ ಹನುಮಂತನಗರಕ್ಕೆ ಮೆರವಣಿಗೆ ಹೊರಟ ಪಾರ್ಥೀವ ಶರೀರಕ್ಕೆ ದಾರಿಯುದ್ದಕ್ಕೂ ನೂರಾರು ಜನರು ಮಳೆಯಲ್ಲೇ ಕಾದುನಿಂತು ಗೌರವ ಸಮರ್ಪಿಸಿದರು.
ಮಾರ್ಗಮಧ್ಯೆ ಹುಟ್ಟೂರು ಗುರುದೇವರಹಳ್ಳಿಗೆ ಮಾದೇಗೌಡರ ಪಾರ್ಥೀವ ಶರೀರ ಆಗಮಿಸಿದಾಗ ಗ್ರಾಮಸ್ಥರ ದುಃಖದ ಕಟ್ಟೆ ಒಡೆಯಿತು. ಇಹಲೋಕ ತ್ಯಜಿಸಿದ ತಮ್ಮೂರಿನ ಮಗನ ಪಾರ್ಥೀವ ಶರೀರ ನೋಡಿದ ಮಹಿಳೆಯರ ಆಕ್ರಂದನ ಮುಗಿಲುಮುಟ್ಟಿತ್ತು.
ಕೆ.ಎಂ.ದೊಡ್ಡಿಯ ಭಾರತಿ ಶಿಕ್ಷಣ ಸಂಸ್ಥೆಯಲ್ಲಿಯೂ ಕೆಲವು ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ, ಹನುಮಂತನಗರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಪುತ್ರ ಡಾ.ಜಿ.ಎಂ.ಪ್ರಕಾಶ್ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ರೈತಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಸುನಂದಾ ಜಯರಾಂ, ಕುರುಬೂರು ಶಾಂತಕುಮಾರ್, ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಂಸದೆ ಸುಮಲತಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮಾಜಿ ಸಚಿವರಾದ ನರೇಂದ್ರಸ್ವಾಮಿ, ಚಲುವರಾಯಸ್ವಾಮಿ, ಮತ್ತಿತರ ಮುಖಂಡರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News