ಚಿಕ್ಕಮಗಳೂರು: ರಾತ್ರಿ ವೇಳೆ ಪ್ರಯಾಣಿಕರ ಸುಲಿಗೆಗ ಸಂಚು; ನಾಲ್ವರನ್ನು ಬಂಧಿಸಿದ ಪೊಲೀಸರು

Update: 2021-07-18 17:20 GMT

ಚಿಕ್ಕಮಗಳೂರು, ಜು.18: ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳನ್ನು ತೋರಿಸಿ ಸಾರ್ವಜನಿಕರು, ವಾಹನಗಳ ಪ್ರಯಾಣಿಕರಿಂದ ಹಣ, ಆಭರಣಗಳನ್ನು ದೋಚಲು ಹೊಂಚು ಹಾಕುತ್ತಿದ್ದ ದರೋಡೆಕೋರರ ತಂಡವೊಂದನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 2 ರಿವಾಲ್ವರ್, 1 ಡ್ರ್ಯಾಗರ್ ಸಹಿತ ಕೃತ್ಯಕ್ಕೆ ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಶಿವಕುಮಾರ್, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹುಲಿವಲ ಗ್ರಾಮದ ಕುಮಾರಸ್ವಾಮಿ, ಬೆಂಗಳೂರಿನ ಮರ್ಲೆ ಅಜಯ್‍ಕುಮಾರ್ ಸಿಂಗ್ ಹಾಗೂ ಮೂಡಿಗೆರೆ ಪಟ್ಟಣದ ಆಜಾದ್ ನಗರದ ನಿವಾಸಿ ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ರಿವಾಲ್ವರ್, ಚಾಕುವಿನಂತಹ ಮಾರಕಾಸ್ತ್ರಗಳನ್ನು ತೋರಿಸಿ ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ನಿರ್ಜನ ಪ್ರದೇಶಗಳಲ್ಲಿ ಅಡ್ಡಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿ ಪ್ರಯಾಣಿಕರಿಂದ ಹಣ, ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

ಕಳೆದ ಶುಕ್ರವಾರ ರಾತ್ರಿ ಮೂಡಿಗೆರೆ ಪೊಲೀಸರು ಬೀಟ್‍ನಲ್ಲಿದ್ದ ವೇಳೆ ಪಟ್ಟಣ ಸಮೀಪದ ಕೃಷ್ಣಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ರಸ್ತೆಯ ಹಂಪ್ಸ್ ಬಳಿ ಸುಲಿಗೆಗೆ ಹೊಂಚು ಹಾಕುತ್ತಿರುವ ಬಗ್ಗೆ ಪೊಲೀಸರಿಗೆ ದೂರವಾಣಿ ಮೂಲಕ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಲಿಗೆಗೆ ಬಳಸುತ್ತಿದ್ದ 2 ರಿವಾಲ್ವರ್, 1 ಡ್ರ್ಯಾಗರ್, ಖಾರದಪುಡಿ, ಟಾರ್ಚ್, ಕಬ್ಬಿಣದ ರಾಡ್‍ ನಂತಹ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್ಸೈ ರವಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News