ನಾಯಕತ್ವ ಬದಲಾವಣೆ ವಿಚಾರ: ಇಳಿಸೋದು, ಏರಿಸೋದು ಆ ಪಾರ್ಟಿ ವಿಚಾರ ಎಂದ ಡಿ.ಕೆ.ಶಿವಕುಮಾರ್

Update: 2021-07-18 17:29 GMT

ಬಾಗಲಕೋಟೆ, ಜು. 18: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಒಂದು ವಾರ ಕಾಯಿರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದು, `ಬಿ.ಎಸ್.ಯಡಿಯೂರಪ್ಪ ಅವರನ್ನು ಇಳಿಸೋದು, ಏರಿಸೋದು ಕೂರಿಸೋದು ಅವರ ಪಾರ್ಟಿಗೆ ಬಿಟ್ಟ ವಿಚಾರ' ಎಂದು ತಮ್ಮದೆ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ಇಲ್ಲಿನ ಬನಹಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಯಡಿಯೂರಪ್ಪ ವಿರುದ್ಧ ಬಿಜೆಪಿಯ ಶಾಸಕರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಶಾಸಕರು ಹೇಳುತ್ತಿರೋದು ಸರಿಯಲ್ಲ ಎಂದು ಹೈಕಮಾಂಡ್ ಹೇಳುತ್ತಿಲ್ಲ. ಹಾಗಿದ್ದರೆ ಅದು ನಿಜ ಇರಬೇಕಲ್ಲ. ಇಲ್ಲದಿದ್ರೆ ಶಾಸಕರು ಹೇಳೋದು ಸರಿ ಇಲ್ಲ ಎಂದು ಹೈಕಮಾಂಡ್ ಹೇಳಬಹುದಿತ್ತು, ಹೇಳುತ್ತಿಲ್ಲ. ಇದರ ಅರ್ಥ ಏನು ಅಂತ ಮಾಡಿಕೊಳ್ಳೋದು' ಎಂದು ಪ್ರಶ್ನಿಸಿದರು.

`ನನ್ ಚೇರ್(ಕುರ್ಚಿ) ಏನೋ ಇದೆಯಪ್ಪಾ, ಬಿಗಿಯಾಗಿದೆ. ಆದರೆ, ಸಿಎಂ ಕುರ್ಚಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ ಶಿವಕುಮಾರ್, ಬಿಎಸ್‍ವೈ ಅವರ ಔತಣಕೂಟದ ಬಗ್ಗೆ ನನಗೆ ಗೊತ್ತಿಲ್ಲ' ಎಂದರು. 

`ರಾಜ್ಯದಲ್ಲಿ ಪಕ್ಷ ಸಂಘಟನೆಯ ಭಾಗವಾಗಿ ಸೋತ ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಶೀಘ್ರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. `ರಾಜ್ಯದಲ್ಲಿ ವಿಭಾಗವಾರು ಸುರ್ಜೆವಾಲಾ ಅವರ ಭೇಟಿ ಕಾರ್ಯಕ್ರಮ ನಿಗದಿಯಾಗಿದೆ. ಮಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡಕ್ಕೂ ಭೇಟಿ ನೀಡಲಿದ್ದು, ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News