ಕೊರೋನದ ಮರೆಯಲ್ಲಿ ಹೊಂಚಿ ಕಾಯುತ್ತಿರುವ ಇತರ ರೋಗಗಳು!

Update: 2021-07-19 18:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಭಾರತ ಅತ್ಯಂತ ವಿಷಮ ಘಟ್ಟದಲ್ಲಿದೆ. ಜಗತ್ತು ಅತ್ಯಂತ ಗಂಭೀರ ವೈರಸ್ ಎಂದು ಪರಿಗಣಿಸಿರುವ ಕೊರೋನದ ಕುರಿತಂತೆ ಇನ್ನೂ ಗ್ರಾಮೀಣ ಮತ್ತು ನಗರ ಪ್ರದೇಶದ ಕೆಳಮಧ್ಯಮ, ಬಡವರ್ಗ ಮಾರಣಾಂತಿಕ ರೋಗವೆಂದು ಪರಿಗಣಿಸಿಯೇ ಇಲ್ಲ. ಕೊರೋನದ ಈ ದಿನಗಳಲ್ಲಿ ಭಾರತದಲ್ಲಿ ಬಡವರು ತತ್ತರಿಸಿರುವುದು ಹಸಿವಿನಿಂದಲೇ ಹೊರತು, ಕೊರೋನದಿಂದ ಅಲ್ಲ. ವಲಸೆ ಕಾರ್ಮಿಕರು ಈ ಹೊತ್ತಿನಲ್ಲೂ ‘ನಮಗೆ ಕೆಲಸ ಮಾಡಲು ಅವಕಾಶ ಕೊಡಿ’ ಕೇಳುತ್ತಿದ್ದಾರೆಯೇ ಹೊರತು, ‘ಲಸಿಕೆ ಕೊಡಿ’ ಎಂದು ಪ್ರಾಣ ಭೀತಿ ವ್ಯಕ್ತಪಡಿಸಿದ್ದಿಲ್ಲ. ಬಹುಶಃ ಕೇಂದ್ರ ಸರಕಾರದ ಲಸಿಕೆ ಅಭಿಯಾನ ವಿಫಲವಾಗಲು ಇದೂ ಮುಖ್ಯ ಕಾರಣವಾಗಿದೆ. ಹಾಗೆಂದು ಸರಕಾರ ಕೊರೋನ ಕುರಿತಂತೆ ನಿರ್ಲಕ್ಷ ವಹಿಸುವುದಕ್ಕೂ ಸಾಧ್ಯವಿಲ್ಲ. ಅಂತರ್‌ರಾಷ್ಟ್ರೀಯ ಮಟ್ಟದ ನಿಯಮಗಳಿಗೆ ಬದ್ಧನಾಗದೇ ಇದ್ದರೆ, ಭಾರತ ಏಕಾಂಗಿಯಾಗಬೇಕಾಗುತ್ತದೆ. ಈ ಕಾರಣದಿಂದ ಶ್ರೀಮಂತ ರಾಷ್ಟ್ರಗಳು ಅತ್ಯುತ್ತಮ ವೈದ್ಯಕೀಯ ಸೌಕರ್ಯಗಳನ್ನು ಒದಗಿಸುವ ಮೂಲಕ ಕೊರೋನವನ್ನು ಗೆದ್ದಿದ್ದರೆ,ಬಡ ಭಾರತ ಮಾತ್ರ ಲಾಕ್‌ಡೌನನ್ನೇ ನೆಚ್ಚಿಕೊಂಡಿದೆ. ಪರಿಣಾಮವಾಗಿ ಇದು ಹಸಿವನ್ನು ಹೆಚ್ಚಿಸುತ್ತದೆ. ಹಸಿವು ಇನ್ನಷ್ಟು ರೋಗಗಳಿಗೆ ಜನರನ್ನು ತಳ್ಳುತ್ತದೆ. ಮಲೇರಿಯಾ, ಡೆಂಗಿ, ಕ್ಷಯದಂತಹ ರೋಗಗಳಿಗೆ ಬಲಿಯಾಗುತ್ತಾ ಬದುಕು ನಡೆಸುತ್ತಿದ್ದ ದೇಶದ ಬಡವರ್ಗ ಕೊರೋನವನ್ನು ‘ಶೀತ, ಕಫ, ಕೆಮ್ಮು’ ಎಂದಷ್ಟೇ ಪರಿಗಣಿಸಿದೆ.

ಬಡ ಹೆಣ್ಣು ಮಗಳೊಬ್ಬಳು ಕೊರೋನಕ್ಕೆ ಮದ್ದು ಹೇಳುತ್ತಾ ‘ಬಿಸಿ ಬಿಸಿ ರಾಗಿ ಮುದ್ದೆ, ಸಾರು ಸಿಕ್ಕಿದರೆ ಸಾಕು. ಕೊರೋನ ಓಡಿ ಹೋಗುತ್ತೆ’ ಎಂದು ಹೇಳುತ್ತಿರುವುದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ದೇಶದ ಅವಶ್ಯಕತೆ ಬಿಸಿ ಬಿಸಿ ರಾಗಿ ಮುದ್ದೆ ಎನ್ನುವುದನ್ನು ಕೊರೋನ ದಿನಗಳಲ್ಲಿ ಬಡವರ್ಗ ಸಾರಿ ಹೇಳುತ್ತಿದೆ. ವಿಚಿತ್ರವೆಂದರೆ, ಕೊರೋನದ ಅತಿ ಹೆಚ್ಚು ಸಂತ್ರಸ್ತರು ಮಧ್ಯಮ, ಮೇಲ್‌ಮಧ್ಯಮ ವರ್ಗದ ಜನರು. ಬಡವರೆಲ್ಲ ಲಾಕ್‌ಡೌನ್ ಸಂತ್ರಸ್ತರು. ಆದುದರಿಂದ ಲಸಿಕೆ ಮತ್ತು ಪೌಷ್ಟಿಕ ಆಹಾರ ಇವೆರಡರ ಜೊತೆಗೆ ಕೊರೋನವನ್ನು ನಾವು ಎದುರಿಸಬೇಕಾಗುತ್ತದೆ. ಆದರೆ ಸರಕಾರ ಗೋಮಾಂಸ, ಮಾಂಸಾಹಾರ ಎಂಬಿತ್ಯಾದಿ ಹೆಸರಲ್ಲಿ ರಾಜಕೀಯ ನಡೆಸಿ, ಅವುಗಳನ್ನೂ ಜನರಿಗೆ ಸಿಗದಂತೆ ಮಾಡಿ ಅರ್ಥವ್ಯವಸ್ಥೆಯನ್ನು ರಾಡಿ ಮಾಡಿಟ್ಟಿದೆ. ಡೆಂಗಿ, ಮಲೇರಿಯಾ, ಕ್ಷಯ, ಎಚ್‌ಐವಿಯಂತಹ ರೋಗಗಳಿಗೆ ಸುರಿಯಬೇಕಾದ ಹಣವನ್ನೆಲ್ಲ ದೇಶ ಕೊರೋನ ಎದುರಿಸುವುದಕ್ಕೆ ಸುರಿಯುತ್ತಿದೆ. ಇಷ್ಟೆಲ್ಲ ಹಣವನ್ನು ಸುರಿದೂ ‘ಲಾಕ್‌ಡೌನ್ ಹೇರಿಕೆ’ಯ ಬೆದರಿಕೆಯನ್ನೂ ಒಡ್ಡುತ್ತಿದೆ. ಕೊರೋನದ ಗದ್ದಲಗಳಿಂದಾಗಿ ಶ್ರೀಸಾಮಾನ್ಯರ ಉಳಿದೆಲ್ಲ ಆರೋಗ್ಯ ಅವಶ್ಯಕತೆಗಳು ಬದಿಗೆ ಸರಿದಿವೆ. ಅವುಗಳ ಕುರಿತಂತೆ ಮಾತನಾಡುವವರೇ ಇಲ್ಲವಾಗಿದ್ದಾರೆ. ಭಾರತದಲ್ಲಿ 2020ರಲ್ಲಿ 3 ಮಿಲಿಯನ್‌ಗೂ ಅಧಿಕ ಮಕ್ಕಳು ಡಿಟಿಪಿ ಮೊದಲ ಡೋಸ್ ಲಸಿಕೆ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಾರಕ ಸೋಂಕು ರೋಗಗಳಾದ ಡಿಫಿತೀರಿಯಾ- ಟಿಟನಸ್-ಪೆರ್ಟುಸಿಸ್(ಗಂಟಲು ಮಾರಿ-ಧನುರ್ವಾತ-ನಾಯಿಕೆಮ್ಮು ರೋಗ)ದ ವಿರುದ್ಧ ವಿಶ್ವದಾದ್ಯಂತ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. 2019ರಲ್ಲಿ ಜಾಗತಿಕವಾಗಿ ಲಸಿಕೆಯ ಪ್ರಥಮ ಡೋಸ್ ಪಡೆಯುವುದರಿಂದ ವಂಚಿತರಾದ ಮಕ್ಕಳ ಸಂಖ್ಯೆ 3.5 ಮಿಲಿಯ ಹೆಚ್ಚಿದ್ದರೆ ದಡಾರ ರೋಗದ ವಿರುದ್ಧದ ಪ್ರಥಮ ಡೋಸ್ ಲಸಿಕೆ ವಂಚಿತ ಮಕ್ಕಳ ಸಂಖ್ಯೆ 3 ಮಿಲಿಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2019ರಲ್ಲಿ ಭಾರತದ 14,03,000 ಮಕ್ಕಳು ಡಿಟಿಪಿ ಪ್ರಥಮ ಡೋಸ್ ಲಸಿಕೆ ಪಡೆದಿಲ್ಲ, ಆದರೆ ಈ ಸಂಖ್ಯೆ 2020ರಲ್ಲಿ 30,38,000ಗೆ ಏರಿಕೆಯಾಗಿದೆ. ಮಧ್ಯಮ ಆದಾಯದ ದೇಶಗಳಲ್ಲಿ ಅಸುರಕ್ಷಿತ ಮಕ್ಕಳ ಪ್ರಮಾಣ ಹೆಚ್ಚುತ್ತಿರುವುದು ಈ ಅಂಕಿ-ಅಂಶದಲ್ಲಿ ವ್ಯಕ್ತವಾಗುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಹೆಚ್ಚುತ್ತಿದ್ದು ಡಿಟಿಪಿ 3 ಡೋಸ್ ಪಡೆದ ಮಕ್ಕಳ ಪ್ರಮಾಣ 91ಶೇ.ದಿಂದ 85ಶೇ.ಕ್ಕೆ ಇಳಿದಿದೆ. ವಿಶ್ವದಾದ್ಯಂತ ಕೊರೋನ ಸೋಂಕಿನ ಸಮಸ್ಯೆ ಮಕ್ಕಳಿಗೆ ಪ್ರತಿರೋಧಕ ಶಕ್ತಿ ನೀಡುವ ಲಸಿಕೀಕರಣ ಪ್ರಕ್ರಿಯೆಗೆ ತೀವ್ರ ತೊಡಕಾಗಿದ್ದು 2020ರಲ್ಲಿ ವಿಶ್ವದಾದ್ಯಂತ ಸುಮಾರು 23 ಮಿಲಿಯನ್ ಮಕ್ಕಳು ಪ್ರಾಥಮಿಕ ಲಸಿಕೀಕರಣದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಸುಮಾರು 17 ಮಿಲಿಯ ಮಕ್ಕಳು ಒಂದೂ ಡೋಸ್ ಲಸಿಕೆಯನ್ನೂ ಪಡೆದಿಲ್ಲ. ಹಲವು ದೇಶಗಳು ಲಭ್ಯ ಸಂಪನ್ಮೂಲವನ್ನು ಕೊರೋನ ಸೋಂಕಿಗೆ ಸಂಬಂಧಿಸಿದ ಚಿಕಿತ್ಸೆಗೆ ಬಳಸಿರುವುದರಿಂದ ಮಕ್ಕಳ ಲಸಿಕೀಕರಣ ಪ್ರಕ್ರಿಯೆಗೆ ಗಮನಾರ್ಹ ತಡೆಯಾಗಿದೆ.

ಇನ್ನು ಕೆಲ ದೇಶಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ಮುಚ್ಚಲಾಗಿದೆ ಅಥವಾ ಕಾರ್ಯಾವಧಿ ಕಡಿಮೆಗೊಳಿಸಿರುವುದು ಸಮಸ್ಯೆಯಾಗಿದೆ. ಲಾಕ್‌ಡೌನ್ ನಿರ್ಬಂಧದಿಂದ ಜನತೆ ಆರೋಗ್ಯ ಕೇಂದ್ರ ತಲುಪಲು ಅಡ್ಡಿಯಾಗಿರುವುದು ಅಥವಾ ಸೋಂಕು ಹರಡುವ ಭೀತಿಯಿಂದ ಆರೋಗ್ಯ ಕೇಂದ್ರದತ್ತ ಹೋಗಲೂ ಹಿಂಜರಿಯುವುದು ಸಮಸ್ಯೆಯ ಇನ್ನೊಂದು ಮುಖವಾಗಿದೆ. ಕುಗ್ರಾಮಗಳಲ್ಲಿ ನೆಲೆಸಿರುವ ಮಕ್ಕಳು, ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ಆರೋಗ್ಯ ಮತ್ತು ಸಾಮಾಜಿಕ ಸೌಲಭ್ಯಗಳ ಪ್ರಯೋಜನ ಕನಿಷ್ಠ ಮಟ್ಟದಲ್ಲಿ ದೊರಕುತ್ತದೆ. ಕೋವಿಡ್-19 ಲಸಿಕೀಕರಣದಲ್ಲಿ ಉತ್ತಮ ಸಾಧನೆ ತೋರಿರುವ ದೇಶಗಳಲ್ಲೂ, ಮಕ್ಕಳ ಲಸಿಕೀಕರಣ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿರುವುದರಿಂದ ಮಕ್ಕಳು ದಡಾರ, ಪೋಲಿಯೊ, ಮಿದುಳಿನ ರೋಗ ಮುಂತಾದ ಮಾರಕ ರೋಗಗಳಿಗೆ ಬಲಿಯಾಗುವ ಅಪಾಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರಾಸ್ ಅದನಾಮ್ ಗೇಬ್ರಿಯೆಸಸ್ ಹೇಳಿದ್ದಾರೆ. ಶ್ರೀಮಂತ ದೇಶಗಳಿಗೆ ಕೊರೋನ ಮಾತ್ರ ಸಮಸ್ಯೆಯಾಗಿದ್ದರೆ, ಭಾರತಕ್ಕೆ ಇತರ ಎಲ್ಲ ಆರೋಗ್ಯ ಸಮಸ್ಯೆಗಳ ಜೊತೆಗೆ ಇನ್ನೊಂದು ಸಮಸ್ಯೆ. ಇದೇ ಸಂದರ್ಭದಲ್ಲಿ ಕೊರೋನವನ್ನು ಮುಂದಿಟ್ಟು ಇತರೆಲ್ಲ ರೋಗಗಳನ್ನು ನಿರ್ಲಕ್ಷಿಸುವುದು ಭಾರತದ ಮಟ್ಟಿಗೆ ಅಪಾಯಕಾರಿಯಾಗಿದೆ.

ಕೊರೋನವನ್ನು ಶಾಶ್ವತವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ಈ ಕೊರೋನ ಜೊತೆಗೆ ಕ್ಷಯ, ಡೆಂಗಿ, ಮಲೇರಿಯಾ ಮೊದಲಾದ ರೋಗಗಳು ಉಲ್ಬಣಗೊಂಡರೆ, ಭಾರತದ ಆರೋಗ್ಯ ವ್ಯವಸ್ಥೆ ಚಿಂದಿಯಾಗಲಿದೆ. ಆದುದರಿಂದ, ಕೊರೋನದ ಜೊತೆಜೊತೆಗೆ ಇತರ ಸಾಂಕ್ರಾಮಿಕ ರೋಗಗಳ ಸ್ಥಿತಿಯೇನಾಗಿದೆ ಎಂದು ಸರಕಾರ ಕಣ್ಣು ಹೊರಳಿಸಿ ನೋಡಬೇಕು. ಈಗಾಗಲೇ ಕೊರೋನ ರೋಗಿಗಳಲ್ಲಿ ಕ್ಷಯ ಹಾಗೆಯೇ ಕ್ಷಯ ರೋಗಿಗಳಲ್ಲಿ ಕೊರೋನ ವೈರಸ್ ಪತ್ತೆಯಾಗಿರುವುದು ಸುದ್ದಿಯಾಗಿದೆ. ಕೊರೋನ ಎನ್ನುವುದು ಇತರೆಲ್ಲ ರೋಗಗಳ ಜೊತೆಗೆ ನಂಟು ಸ್ಥಾಪಿಸಿಕೊಂಡರೆ, ಭಾರತ ಶಾಶ್ವತ ಲಾಕ್‌ಡೌನ್ ಘೋಷಿಸಬೇಕಾದ ಸಂದರ್ಭ ಬರಬಹುದು. ಆದುದರಿಂದ, ಕೊರೋನ ಜೊತೆಗೆ ಇತರ ರೋಗಗಳ ಬಗ್ಗೆಯೂ ಸರಕಾರ ಮಾತನಾಡಲು ಆರಂಭಿಸಬೇಕು. ಜನರಿಗೆ ಪೌಷ್ಟಿಕ ಆಹಾರ ದೊರಕುವಂತಾಗಲು ಗೋಮಾಂಸಾಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಈ ಮೂಲಕ ಮಾಂಸಾಹಾರ ಜನರಿಗೆ ಕಡಿಮೆ ದರದಲ್ಲಿ ಸಿಗುವಂತಾಗುತ್ತದೆ. ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ಸರಕಾರ ಸುರಿಯುತ್ತಿರುವ ಹಣವನ್ನು ಆಸ್ಪತ್ರೆಗಳಿಗೆ ವರ್ಗಾಯಿಸಬೇಕು. ಗೋಶಾಲೆಗಳಲ್ಲಿರುವ ಅನುಪಯುಕ್ತ ಗೋವುಗಳು ಜನರ ಪೌಷ್ಟಿಕ ಆಹಾರಕ್ಕೆ ಬಳಕೆಯಾಗಬೇಕು. ಈ ಮೂಲಕ ಆಹಾರದ ಬೆಲೆಯೇರಿಕೆಗಳನ್ನು ತಡೆಯುವುದಲ್ಲದೆ, ಆಸ್ಪತ್ರೆಗಳಿಗೆ ಹೆಚ್ಚು ಹೆಚ್ಚು ಅನುದಾನಗಳು ದೊರಕುವಂತಾಗುತ್ತದೆ. ರೈತರೂ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಾರೆ. ಪೌಷ್ಟಿಕ ಆಹಾರದ ಮೂಲಕ ಅನಾರೋಗ್ಯವನ್ನು ಗೆಲ್ಲುವ ಅಭಿಯಾನ ಆರಂಭವಾದ ದಿನ, ದೇಶ ಕೊರೋನವನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ ಪಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News