ಸೋಮವಾರಪೇಟೆ: ಸೋಲಾರ್ ವಿದ್ಯುತ್ ತಂತಿಗೆ ಸಿಲುಕಿ ಕಾಡಾನೆ ಮರಿ ಸಾವು
Update: 2021-07-19 00:09 IST
ಸೋಮವಾರಪೇಟೆ,ಜು.19: ಸೋಲಾರ್ ತಂತಿಗೆ ಸಿಲುಕಿ ಕಾಡಾನೆ ಮರಿ ಮೃತಪಟ್ಟಿರುವ ಘಟನೆ ಅರೇಯೂರು-ನೇಗಳ್ಳೆ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಪೂವಯ್ಯ ಎಂಬವರ ತೋಟದಲ್ಲಿ ಭಾನುವಾರ ಕಾಡಾನೆ ಕಳೇಬರ ಪತ್ತೆಯಾಗಿದೆ. ನೇಗಳ್ಳೆ ಅವಿನಾಶ್ ಎಂಬವರು ಪೂವಯ್ಯ ಅವರ ಜಾಗದಲ್ಲಿ ಲೀಸ್‍ನಲ್ಲಿ ಶುಂಠಿ ಕೃಷಿ ಮಾಡಿದ್ದರು. ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಸ್ವಂತವಾಗಿ ಸೋಲಾರ್ ತಂತಿಬೇಲಿ ನಿರ್ಮಿಸಿದ್ದರು. ಯಡವನಾಡು ಮೀಸಲು ಅರಣ್ಯದಿಂದ ಕಾಡಾನೆ ಹಿಂಡು ತಂತಿಯನ್ನು ದಾಟುವ ಸಂದರ್ಭ 8 ವರ್ಷ ಪ್ರಾಯದ ಆನೆಮರಿಯ ಸೊಂಡಲಿಗೆ ತಂತಿ ಸ್ಪರ್ಶಗೊಂಡು ಮೃತಪಟ್ಟಿದೆ ಎನ್ನಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಬದಾಮಿ ಕಳೇಬರ ಪರೀಕ್ಷೆ ನಡೆಸಿದರು.