ನಾಯಕತ್ವ ಬದಲಾವಣೆ ವಿಚಾರ: ರಾಜ್ಯ ಬಿಜೆಪಿಯಲ್ಲಿ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಸಂಚಲನ

Update: 2021-07-19 12:12 GMT

ಬೆಂಗಳೂರು, ಜು. 19: ರಾಜ್ಯ ಬಿಜೆಪಿಯಲ್ಲಿ `ನಾಯಕತ್ವ ಬದಲಾವಣೆ' ವಿಚಾರದ ಬೆನ್ನಲ್ಲೇ, `ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಯುವುದು ನಿಶ್ಚಿತ' ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಆಪ್ತರೊಂದಿಗೆ ತುಳುಭಾಷೆಯಲ್ಲಿ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, `ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೆ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲವರನ್ನು ಕೈಬಿಟ್ಟು ಹೊಸ ತಂಡವನ್ನು ಕಟ್ಟಲಾಗುವುದು' ಎಂಬ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಆಡಿಯೋದಲ್ಲಿ ಇವೆ. ಇದು ಸಿಎಂ ಯಡಿಯೂರಪ್ಪ ಪದಚ್ಯುತಿ ಸುಳಿವು ನೀಡಿದೆಯಲ್ಲದೆ, ರಾಜ್ಯದಲ್ಲಿ ಹೊಸ ಸಿಎಂ ಬರಲಿದ್ದಾರೆಂಬ ಸಂಶಯಕ್ಕೆ ಪುಷ್ಟಿ ನೀಡಿದೆ.

ತನಿಖೆಗೆ ಒತ್ತಾಯ: `ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಾಟ್ಸ್‍ಆಪ್‍ನಲ್ಲಿ ಹರಿಬಿಟ್ಟಿದ್ದು, ಇದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಮನವಿ ಮಾಡಿದ್ದಾರೆ.

`ಪಕ್ಷಕ್ಕೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಈ ಆಡಿಯೋವನ್ನು ಹರಿಬಿಟ್ಟಿದ್ದು, ತನಿಖೆ ನಡೆಸಿದರೆ ಅದರ ನಕಲಿತನ ಸಾಬೀತಾಗಲಿದೆ. ಆದುದರಿಂದ ತಾವು ಅದರ ಹಿಂದಿರುವ ಕಿಡಿಗೇಡಿಗಳು ಯಾರೆಂಬ ಕುರಿತು ತನಿಖೆ ನಡೆಸಲು ಒತ್ತಾಯಿಸುತ್ತಿದ್ದೇನೆ' ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟನೆಯಲ್ಲಿ ಆಗ್ರಹಪಡಿಸಿದ್ದಾರೆ.

ಪಕ್ಷದ ಹೆಸರು ಕೆಡಿಸುವ ಷಡ್ಯಂತ್ರ: `ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿದ್ದು ಪಕ್ಷದ ಹೆಸರು ಕೆಡಿಸುವ ಷಡ್ಯಂತ್ರ. ಆಡಿಯೋ ಸತ್ಯಾಸತ್ಯತೆ ಬಯಲಿಗೆ ಬರಲಿ' ಎಂದು ಆಗ್ರಹಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, `ಯಡಿಯೂರಪ್ಪ ದಿಲ್ಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದು, ಆ ಬಳಿಕ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ನೀರಾವರಿ, ಅಭಿವೃದ್ಧಿ ಬಗ್ಗೆ ಚರ್ಚೆಗೆ ಹೋಗಿದ್ದೆ ಎಂದಿದ್ದಾರೆ. ಆದರೆ, ನಾಯಕತ್ವ ವಿಚಾರ ವರಿಷ್ಠರ ಜತೆ ಚರ್ಚೆ ಆಗಿಲ್ಲ ಎಂದು ಸಿಎಂ ಸ್ಪಷ್ಟಣೆ ನೀಡಿದ ಮೇಲೆ ಇನ್ನೇನು ಹೇಳುವುದು' ಎಂದು ಪ್ರಶ್ನಿಸಿದರು.

`ಇನ್ನು ಔತಣಕೂಟದ ಕುರಿತು ನಮಗೆ ಬಂದ ಮಾಹಿತಿ. ಶಾಸಕಾಂಗ ಪಕ್ಷದ ಸಭೆ ಬೇರೆ, ಔತಣ ಕೂಟ ಬೇರೆ. ನನಗೆ ಶಾಸಕಾಂಗ ಪಕ್ಷದ ಸಭೆ ಎಂದು ಕೇಳಿ ಬಂದಿಲ್ಲ. ಸಂಜೆ ಸಿಎಂ ಭೇಟಿ ಮಾಡ್ತೇನೆ, ಆಗ ಯಾವ ಸಭೆ ಅಂತ ಗೊತ್ತಾಗುತ್ತೆ' ಎಂದ ಲಕ್ಷ್ಮಣ ಸವದಿ, `ಮುಖ್ಯಮಂತ್ರಿ ಆಗಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ, ಇದೀಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ' ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News