ಮುಖ್ಯಮಂತ್ರಿ ಸ್ಥಾನಕ್ಕೆ 2 ಸಾವಿರ ಕೋಟಿ ರೂ.ಆಮಿಷ: ಶಾಸಕ ಯತ್ನಾಳ್ ಗಂಭೀರ ಆರೋಪ

Update: 2021-07-19 12:46 GMT

ವಿಜಯಪುರ, ಜು. 19: `ಕೆಲವರು ನನ್ನನ್ನು ಮುಖ್ಯಮಂತ್ರಿ ಮಾಡಿದರೆ 2 ಸಾವಿರ ಕೋಟಿ ರೂ.ಹಣ ನೀಡುವೆ ಎಂದು ಹೊಸದಿಲ್ಲಿಗೆ ತೆರಳಿದ್ದರು' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲು ಕೆಲವರು ಹಲವು ತಿಂಗಳಿನಿಂದ ಭಾರೀ ಕಸರತ್ತು ನಡೆಸುತ್ತಿದ್ದಾರೆ. 2 ಸಾವಿರ ಕೋಟಿ ರೂ. ಹಣ ನೀಡಲು ಮುಂದಾಗಿದ್ದರು. ಆದರೆ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಜೆ.ಪಿ.ನಡ್ಡಾ ಇಂಥ ಆಮಿಷಗಳಿಗೆ ಬಗ್ಗುವವರಲ್ಲ. ಹಣದ ಆಮಿಷ ಕೊಟ್ಟರೆ ಕಪಾಳಕ್ಕೆ ಹೊಡೆಯುತ್ತಾರೆ' ಎಂದು ಎಚ್ಚರಿಕೆ ನೀಡಿದರು.

`ನಾಯಕತ್ವ ಬದಲಾವಣೆ ಸಂಬಂಧ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಆಗಲಿದೆ ಎಂದ ಅವರು, ನಾವು ಭವಿಷ್ಯಕ್ಕೆ ತಕ್ಕಂತೆ ಕೆಲವು ನಿರ್ಧಾರಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಪಕ್ಷದ ಹಿತದೃಷ್ಟಿ, 2023ರ ಚುನಾವಣೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷ ನಿರ್ಧಾರ ಕೈಗೊಳ್ಳತ್ತದೆ. ಹಿಂದುತ್ವವನ್ನು ರಕ್ಷಣೆ ಮಾಡುವವರನ್ನೇ ವರಿಷ್ಠರು ಸಿಎಂ ಮಾಡುತ್ತಾರೆ. ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಪರವಾಗಿ ಇರುವವರಿಗೆ ಉನ್ನತ ಹುದ್ದೆ ದೊರೆಯಬಹುದು. ಏನೇ ಆದರೂ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ' ಎಂದು ಅವರು ತಿಳಿಸಿದರು.

`ರಾಜ್ಯದಲ್ಲಿ ವಿರೋಧ ಪಕ್ಷ ಎಂಬುದೇ ಅಸ್ತಿತ್ವದಲ್ಲಿಲ್ಲ. ಇಲ್ಲಿ ಎಲ್ಲರೂ ಭ್ರಷ್ಟಾಚಾರದ ರಕ್ಷಕರಾಗಿದ್ದಾರೆ. ಆಡಳಿತ ಪಕ್ಷ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ತಮ್ಮ ತಮ್ಮ ವ್ಯವಹಾರ, ವಹಿವಾಟು ನೋಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News