ನಟ ದರ್ಶನ್ ಹಿಂಬಾಲಕರಿಂದ ಬೆದರಿಕೆ: ನಿರ್ದೇಶಕ ಇಂದ್ರಜಿತ್ ಆರೋಪ
ಬೆಂಗಳೂರು, ಜು.19: ನಟ ದರ್ಶನ್ ಬೆಂಬಲಿಗರಿಂದ ನಿರಂತರ ಬೆದರಿಕೆ ಬರುತ್ತಿದೆ ಎಂದು ಸಿನೆಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಿ ಸುಮಾರು 30ರಿಂದ 35 ಜನರು ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿಯ ಬೆದರಿಕೆಗೆ ತಾವು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ. ದರ್ಶನ್ ಮತ್ತು ಅವರ ಹಿಂಬಾಲಕರ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲು ಮಾಡಿರುವುದಾಗಿ ಹೇಳಿದರು.
ಪ್ರತಿ 30ಸೆಕೆಂಡ್‍ಗೆ ಒಮ್ಮೆ ದರ್ಶನ್ ಹಿಂಬಾಲಕರು ದೂರವಾಣಿ, ವಾಟ್ಸಪ್ ಸಂದೇಶ ಮತ್ತು ವಿಡಿಯೊ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ದರ್ಶನ್ ಅವರ ಹಿಂದೆ ರೌಡಿಗಳು ಇದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳ ವಿರುದ್ಧ ದರ್ಶನ್ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಒಬ್ಬ ನಟನಾಗಿ ಈ ರೀತಿಯ ಪದ ಬಳಕೆ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ತಮ್ಮ ವಿರುದ್ಧ ಬರುತ್ತಿರುವ ದೂರವಾಣಿ ಕರೆಗಳ ಬೆದರಿಕೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.